ಮೈಸೂರು: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದು ಹಲವು ದಿನ ಕಳೆದಿದ್ದರೂ ಖಾತೆ ಖ್ಯಾತೆ ಮುಂದುವರೆದಿದೆ ಎಂದು ಮಾಜಿ ಸಚಿವ ಡಾ. ಅಶ್ವಥ್ ನಾರಾಯಣ ಟೀಕಿಸಿದರು
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶಿವಕುಮಾರ್ ಅವರ ನೇತೃತ್ವದಲ್ಲಿ 14 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು,ಅವರೆಲ್ಲಾ 14 ದಿಕ್ಕಿನಲ್ಲಿ ಮಾತನಾಡುತ್ತಿದ್ದಾರೆ. ಒಬ್ಬ ಸಚಿವರು ಸಂತೋಷವಾಗಿದ್ದೇವೆ ಎಂದು ಹೇಳುತ್ತಿಲ್ಲ ಎಂದು ಅಶ್ವಥ್ ನಾರಾಯಣ ವ್ಯಂಗ್ಯವಾಡಿದರು.
ಸರಕಾರದ ಆಡಳಿತ ವೈಖರಿ ಬಗ್ಗೆ ಈಗಲೇ ಮಾತನಾಡುವುದು ಬೇಡ. ಇನ್ನೊಂದಿಷ್ಟು ದಿನ ಕಳೆದು ಅವರು ಯಾವ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ನೋಡಿ ಆನಂತರ ಮಾತನಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಖಾತೆ ಖ್ಯಾತೆಯ ವಿಷಯದಲ್ಲಿ ಆ ಶಿವನೇ ಶಿವಕುಮಾರ್ ಅವರನ್ನು ಕಾಪಾಡಬೇಕು ಎಂದು ಹೇಳಿದರು.
ಈಗ ಕೇವಲ 14 ಮಂದಿಗೆ ಮಾತ್ರ ಖಾತೆ ನೀಡಲಾಗಿದೆ ಮುಂದೆ ವಿಸ್ತರಣೆಯಾದ ನಂತರ ಇನ್ನೇನೇನು ನಡೆಯಲಿದೆಯೊ ಎಂಬುದನ್ನು ಕಾದು ನೋಡಬೇಕು ಎಂದು ಮಾಜಿ ಸಚಿವರು ತಿಳಿಸಿದರು.
ಎಸ್ಐಆರ್ ಬಗ್ಗೆ ಕೇಳಿದ ಪ್ರಶ್ನೆಗೆ, ಮತದಾರರ ಪಟ್ಟಿಯಲ್ಲಿನ ದೋಷವನ್ನು ಸರಿಪಡಿಸುವ ಉದ್ದೇಶ ಕಾಂಗ್ರೆಸ್ ಗೆ ಇಲ್ಲ ಹಾಗಾಗಿ ವಿರೋಧಿಸುತ್ತಿದ್ದಾರೆ ಎಂದು ಉತ್ತರಿ ಸಿದರು.
ಕೇಂದ್ರದ ಬಿಜೆಪಿ ಸರಕಾರ ಬೆಲೆ ಏರಿಕೆ ತಡೆಗಟ್ಟಲು ಯತ್ನಿಸುತ್ತಿದ್ದರೆ ಇತ್ತ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡಲು ಹುನ್ನಾರ ನಡೆಸುತ್ತಿದೆ ಎಂದು ಅಶ್ವತ್ ನಾರಾಯಣ ಆರೋಪಿಸಿದರು.
ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಚಿವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸುವಲ್ಲಿ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.
ಜಿ ಎಸ್ ಟಿ ಬಗ್ಗೆ ಕೇಳಿದ ವರದಿಗಾರರ ಪ್ರಶ್ನೆಗೆ, ಜಿಎಸ್‌ಟಿಯ ಶೇ. 75ರಷ್ಟು ಭಾಗವನ್ನು ರಾಜ್ಯಕ್ಕೆ ಕೇಂದ್ರ ನೀಡುತ್ತಿದೆ ಆ ಹಣವನ್ನು ರಾಜ್ಯ ಸರ್ಕಾರ ಏನು ಮಾಡುತ್ತಿದೆ ,ಈ ಬಗ್ಗೆ ಅವರನ್ನೇ ಕೇಳಿ ಎಂದು ಮಾರ್ಮಿಕವಾಗಿ ಹೇಳಿದರು.
ತೈಲ ಬೆಲೆ ದಿನೇದಿನೆ ಏರಿಕೆ ಆಗುತ್ತಿದೆಯಲ್ಲ ಎಂಬ ಮತ್ತೊಂದು ಪ್ರಶ್ನೆಗೆ, ಯುದ್ಧ ಇಲ್ಲದಿದ್ದರೆ ತೈಲಬೆಲೆ ಆಗುತ್ತಿರಲಿಲ್ಲ, ಬೇರೆ ದೇಶಕ್ಕೆ ಹೋಲಿಸಿಕೊಂಡರೆ ನಮ್ಮ ದೇಶದಲ್ಲಿ ಕಡಿಮೆ ಹೆಚ್ಚಳ ಮಾಡಲಾಗಿದೆ ಎಂದು ಅಶ್ವಥ್ ನಾರಾಯಣ ಸಮರ್ಥಿಸಿಕೊಂಡರು.
ದೇಶದಲ್ಲಿ ಕ್ರಾಂತಿ ಮಾಡಿರುವ ನಾಯಕ ಎಂದರೆ ಪ್ರಧಾನಿ ನರೇಂದ್ರ ಮೋದಿಯವರು ಅವರು ಅಧಿಕಾರಕ್ಕೆ ಬಂದ ನಂತರ ಈವರೆಗೂ ಕಾಂಗ್ರೆಸ್ ಮಾಡಿರುವ ತಪ್ಪುಗಳನ್ನು ಸರಿಪಡಿಸುವಲ್ಲಿಯೇ ಸಮಯ ಆಗುತ್ತಿದೆ ಎಂದು ಹೇಳಿದರು.
ಮೋದಿಯವರು ಅಧಿಕಾರಕ್ಕೆ ಬಂದ ನಂತರ ತಾವು ಹೇಳಿದ ಪ್ರತಿಯೊಂದನ್ನೂ ಜಾರಿಗೆ ತಂದಿದ್ದಾರೆ ಹಾಗಾಗಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ,ಮೇಕ್ ಇನ್ ಇಂಡಿಯಾದಿಂದ ಭಾರತದ ಕೈಗಾರಿಕಾ ಕ್ಷೇತ್ರದಲ್ಲಿ ಅತ್ಯುತ್ತಮ ಬೆಳವಣಿಗೆ ಆಗಿದೆ ಎಂದು ಡಾ.ಅಶ್ವಥ್ ನಾರಾಯಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ, ಬಿಜೆಪಿ ಮುಖಂಡರುಗಳಾದ ಮೋಹನ್, ಮಹೇಶ್, ಸಂದೇಶ್ ಸ್ವಾಮಿ, ಶಿವಕುಮಾರ್, ಸುಬ್ಬಣ್ಣ ಮತ್ತಿತರರು ಉಪಸ್ಥಿತರಿದ್ದರು.

