ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್‌ನಲ್ಲಿ ಸಿಲಿಂಡರ್ ಸ್ಫೋಟ:ಇಬ್ಬರ ದುರ್ಮರಣ

ಮೈಸೂರು: ಮೈಸೂರಿನ ದಟ್ಟಗಳ್ಳಿ ಸಮೀಪದ ‘ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್’ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದ್ದು ಇಬ್ಬರು ಮೃತಪಟ್ಟಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರಕಾಶ್ ಹಾಗೂ ಸುಹೆಲ್ ಎಂಬವರು ಮೃತಪಟ್ಟಿದ್ದು,ಪಬ್‌ನಲ್ಲಿದ್ದ ಹಲವರಿಗೆ ಸುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಫೋಟದ ಬಳಿಕ ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಪಬ್ ನಲ್ಲಿದ್ದವರು ಆತಂಕಗೊಂಡು ಮೇಲಂತಸ್ತಿನಿಂದ ಜಿಗಿದು ಪಾರಾಗಲು ಯತ್ನಿಸಿದ್ದಾರೆ,ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟರು.

ಸ್ಪೋಟದ ತೀವ್ರತೆಗೆ ಇಡೀ ಆವರಣ ಸುಟ್ಟು ಕರಕಲಾಗಿದೆ.

ಫಾಕ್ಸ್ ಡೆನ್ ಮೇಲಂತಸ್ತು ಮರ ಮತ್ತು ಹುಲ್ಲಿನಿಂದ ಅಲಂಕರಿಸಲಾಗಿತ್ತು.ಹಾಗಾಗಿ ಬೆಂಕಿ ಬೇಗ ಆವರಿಸಿದೆ,ಮೇಲಿಂದ ಕೆಳಗೆ ಬರಲು ಚಿಕ್ಕ ಸ್ಟೆಪ್ ಮಾತ್ರ ಇದೆ.ಜತೆಗೆ ಹೊರಗೆ ಬರಲು ಕೂಡಾ ಒಂದೇ ಬಾಗಿಲು ಇದ್ದುದರಿಂದ ಬಹಳ ಮಂದಿ ಬೆಂಕಿಯಿಂದ ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವಘಡಕ್ಕೆ ಕಾರಣ ಏನು ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.