(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಸುವರ್ಣವತಿ ಸೇತುವೆಗೆ ಕಾರೊಂದು ಡಿಕ್ಕಿ ಹೊಡೆದು ನ್ಯಾಯಾಂಗ ಇಲಾಖೆಯ ಇಬ್ಬರು ನೌಕರರು ಸ್ಥಳದಲ್ಲೇ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಪಟ್ಟಣದ ಮುಡಿಗುಂಡದ ಬಳಿ ತಡರಾತ್ರಿ ಈ ಅಪಘಾತ ಸಂಭವಿಸಿದ್ದು,ಗಾಯಾಳುಗಳನ್ನು
ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ.
ಕೊಳ್ಳೇಗಾಲ ನ್ಯಾಯಾಂಗ ಇಲಾಖೆಯ ಐವರು ನೌಕರರು ಚಾಮರಾಜನಗರದ ಸಂತೇಮರಹಳ್ಳಿ ಸಮೀಪದ ನಡುಕಲ ಮೋಳೆ ಗ್ರಾಮದಲ್ಲಿ ಸ್ನೇಹಿತರ ಮನೆಯ ತೊಟ್ಟಿಲು ಶಾಸ್ತ್ರ ಮುಗಿಸಿಕೊಂಡು ರಾತ್ರಿ 11 ಗಂಟೆಗೆ ಕಾರಿನಲ್ಲಿ ವಾಪಸ್ಸು ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಬೆಳಗಾವಿಯ ಯಮನಪ್ಪ ಭಜಂತ್ರಿ(50) ಹಾಗೂ ಬಾಗೇಪಲ್ಲಿಯ ನಂಜುಂಡಪ್ಪ (55) ಎಂಬುವರು ಸ್ಥಳದಲ್ಲಿ ಮೃತಪಟ್ಟಿದ್ದು ಲೋಕೇಶ್, ಶಂಕ್ರಪ್ಪ, ಕೃಷ್ಣಪ್ಪ ಗಂಭೀರ ಗಾಯಗಳಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತ ಯಮನಪ್ಪ ಭಜಂತ್ರಿ ಮಾಜಿ ಸೈನಿಕರಾಗಿದ್ದು ಕೊಳ್ಳೇಗಾಲ ನ್ಯಾಯಾಲಯದಲ್ಲಿ ಡಿ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು.
ನಂಜುಂಡಪ್ಪ ಅವರು ಸಿವಿಲ್ ನ್ಯಾಯಾಲಯದ ಮುಖ್ಯ ಶಿರಸ್ತೆದಾರರಾಗಿ ದ್ದರು. ಗಾಯಾಳುಗಳಾದ ಬೆಂಚ್ ಶಿರಸ್ತೆದಾರ್ ಕೃಷ್ಣಪ್ಪ, ದ್ವಿತೀಯ ದರ್ಜೆ ಸಹಾಯಕ ಲೋಕೇಶ್ ಹಾಗೂ ಡಿ ಗ್ರೂಪ್ ನೌಕರ ಶಂಕ್ರಪ್ಪ. ಎಲ್ಲರೂ ಕೃಷ್ಣಪ್ಪರವರ ಕಾರಿನಲ್ಲಿ ಹೋಗಿ ಬರುತ್ತಿದ್ದರು ಕೃಷ್ಣಪ್ಪ ಕಾರು ಚಾಲನೆ ಮಾಡುತ್ತಿದ್ದರು.
ವಿಷಯ ತಿಳಿದ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರಿನಲ್ಲಿದ್ದ ಮೃತ ದೇಹಗಳನ್ನು ಹಾಗೂ ಗಾಯಾಳುಗಳನ್ನು ಹೊರಕ್ಕೆ ತೆಗೆದು ಆಸ್ಪತ್ರೆಗೆ ಸಾಗಿಸಿದರು
ಮೃತ ದೇಹಗಳನ್ನು ವೈದ್ಯರಿಂದ ಪಂಚನಾಮೆ ನಡೆಸಿ ವಾರಸುದರಿಗೆ ನೀಡಿದ್ದಾರೆ.
ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಯ ತಿಳಿದ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಪ್ರಭಾವತಿ, ಅಪರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಕಾಂತ್, ಎಡಿಜೆ ನ್ಯಾಯಾಲಯದ ನ್ಯಾಯಾಧೀಶರಾದ ಕಾವ್ಯಶ್ರೀ, ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಸುನಿತಾ, ಅಪರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ರಂಜಿತ್ ಕುಮಾರ್ ಸ್ಥಳಕ್ಕೆ ಭೇಟಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
ಘಟನೆಯ ಬಗ್ಗೆ ಇಲ್ಲಿನ ತಾಲ್ಲೂಕು ವಕೀಲರ ಸಂಘ ತೀವ್ರ ಸಂತಾಪ ಸೂಚಿಸಿದೆ, ಸಂಘದ ಅಧ್ಯಕ್ಷ ಬಸವರಾಜು ಕಾರ್ಯದರ್ಶಿ ಕೆಂಪುರಾಜು ಹಾಗೂ ಹಿರಿಯ ವಕೀಲರು ಮೃತರ ಸೇವೆಯನ್ನು ಸ್ಮರಿಸಿ ಆತ್ಮಕ್ಕೆ ಚಿರಶಾಂತಿ ಕೋರಿದರು.

