ಮೈಸೂರು: ಪ್ರೀತಿಸಿ ಮದುವೆಯಾದ 19 ವರ್ಷದ ವಿವಾಹಿತೆಯನ್ನು ಮೂವರು ಅಪಹರಿಸಿ ರಾಮನಗರದ ಮನೆಯೊಂದರಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದ ಪ್ರಕರಣ ನಡೆದಿದೆ.
ಸಂತ್ರಸ್ತೆಯ ಮಾಹಿತಿ ಆಧಾರದ ಮೇಲೆ ರಾಮನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆಕೆಯನ್ನು ರಕ್ಷಿಸಿದ್ದಾರೆ.
ಪ್ರಕರಣ ಸಂಬಂಧ ಮೈಸೂರಿನ ಆಲನಹಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಅಪಹರಣಕ್ಕೊಳಗಾದವರು ಆಲನಹಳ್ಳಿಯ ಶಿವಕುಮಾರ್ ಅವರ ಪತ್ನಿ ಭವ್ಯ (19).
ರಾಮನಗರದ ಸುಮ, ಕಿರಣ್ ಹಾಗೂ ಮತ್ತೊಬ್ಬ ಮಹಿಳೆ ಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲೆಕ್ಟ್ರಿಷಿಯನ್ ಕೆಲಸ ಮಾಡುವ ಶಿವಕುಮಾರ್ ಒಂದು ವರ್ಷದ ಹಿಂದೆ ಹಾಸನ ಜಿಲ್ಲೆ ಸಕಲೇಶಪುರದ ಭವ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದು,
ದಂಪತಿ ಆಲನಹಳ್ಳಿಯಲ್ಲಿ ವಾಸವಾಗಿದ್ದಾರೆ.
ಜೂನ್ 25ರಂದು ಶಿವಕುಮಾರ್ ಕೆಲಸದ ನಿಮಿತ್ತ ಬೋಗಾದಿಗೆ ಹೋಗಿದ್ದರು. ಪತ್ನಿಗೆ ಫೋನ್ ಮಾಡಿದಾಗ ಸ್ವಿಚ್ ಆಫ್ ಬಂದಿದ್ದು, ದೇವಸ್ಥಾನಕ್ಕೆ ಹೋಗಿರಬಹುದು ಎಂದು ಸುಮ್ಮನಾಗಿದ್ದಾರೆ.
ರಾತ್ರಿಯಾದರೂ ಪತ್ನಿ ಮನೆಗೆ ವಾಪಸಾಗದ ಕಾರಣ ಆತಂಕಗೊಂಡಿದ್ದಾರೆ.ಆದರೆ ಶಿವಕುಮಾರ್‌ಗೆ ಮರುದಿನ ಪತ್ನಿಯೇ ಫೋನ್ ಕರೆ ಮಾಡಿದ್ದಾರೆ. ನನ್ನನ್ನು ಮೂವರು ರಾಮನಗರಕ್ಕೆ ಕರೆತಂದು ಮನೆಯೊಂದರಲ್ಲಿ ಬಂಧಿಸಿಟ್ಟಿದ್ದಾರೆ, ರಕ್ಷಣೆ ಮಾಡಿ ಎಂದು ಭವ್ಯ ಮಾಹಿತಿ ನೀಡಿ ಲೊಕೇಶನ್ ಕಳುಹಿಸಿದ್ದಾರೆ.
ಕೂಡಲೇ ಶಿವಕುಮಾರ್ 112ಗೆ ಸಂಪರ್ಕಿಸಿ ಮಾಹಿತಿ ನೀಡಿದ್ದು, ರಾಮನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಭವ್ಯರನ್ನು ರಕ್ಷಿಸಿದ್ದಾರೆ. ರಾಮನಗರಕ್ಕೆ ತೆರಳಿದ ಶಿವಕುಮಾರ್ ಪತ್ನಿಯನ್ನು ಸುರಕ್ಷಿತವಾಗಿ ಕರೆ ತಂದಿದ್ದಾರೆ.
ಈ ಸಂಬಂಧ ಶಿವಕುಮಾರ್ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸುಮ, ಕಿರಣ್ ಹಾಗೂ ಮತ್ತೊಬ್ಬ ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಪಹರಣಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ, ಒಟ್ಟಾರೆ ಈ ಪ್ರಕರಣ ಗೊಂದಲದಿಂದ ಕೂಡಿದೆ.
ತನಿಖೆಯಿಂದ ಎಲ್ಲಾ ಸತ್ಯ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.

