ಮೈಸೂರು, ಜುಲೈ.1: ಮೈಸೂರಿನ ವಿವಿಧ ರಸ್ತೆಗಳಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್‌ಗಳಿಗೆ ಮಹಾನಗರ ಪಾಲಿಕೆಯ ಅನುಮತಿ ಇಲ್ಲ.
ಇದರ ಬಗ್ಗೆ ಹಿರಿಯ ವಕೀಲ ಅ.ಮ. ಭಾಸ್ಕರ್ ಅವರು ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ಪಾಲಿಕೆ ಉತ್ತರ ನೀಡಿದ್ದು ಅಚ್ಚರಿ ತಂದಿದೆ.
ಹಿರಿಯ ವಕೀಲ ಅ.ಮ. ಭಾಸ್ಕರ್ ಅವರು ಅರ್ಜಿ ಸಲ್ಲಿಸಿ, ಮೈಸೂರು ನಗರ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಳವಡಿಸಲಾದ ಟ್ರಾಫಿಕ್ ಸಿಗ್ನಲ್‌ಗಳಿಗೆ ಪಾಲಿಕೆಯಿಂದ ನೀಡಲಾದ ಆಡಳಿತಾತ್ಮಕ ಅನುಮೋದನೆ, ತಾಂತ್ರಿಕ ಮಂಜೂರು, ಅಂದಾಜು ವೆಚ್ಚ, ಪೊಲೀಸ್ ಇಲಾಖೆಯಿಂದ ಬಂದ ಪ್ರಸ್ತಾವನೆಗಳು, ಸಿವಿಲ್ ಕಾಮಗಾರಿಗಳ ವಿವರ, ಕಡತ ಟಿಪ್ಪಣಿಗಳು ಹಾಗೂ ಆಂತರಿಕ ಪತ್ರ ವ್ಯವಹಾರಗಳ ದಾಖಲೆಗಳನ್ನು ಒದಗಿಸುವಂತೆ ಕೋರಿದ್ದರು.
ಇದರ ಜೊತೆಗೆ, ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಸಂಬಂಧಿಸಿದಂತೆ ಪಾಲಿಕೆಯಿಂದ ಯಾವುದೇ ಆಕ್ಷೇಪಣೆ ವ್ಯಕ್ತವಾಗಿತ್ತೇ, ಅನುಮತಿ ನೀಡಿದ ಅಧಿಕಾರಿಗಳ ಹೆಸರು ಮತ್ತು ಹುದ್ದೆಗಳು, ಅನಧಿಕೃತ ಅಳವಡಿಕೆಗಳಿದ್ದರೆ ಕೈಗೊಂಡ ಕ್ರಮ, ಪೊಲೀಸ್ ಇಲಾಖೆ ಮತ್ತು ಪಾಲಿಕೆ ನಡುವಿನ ಸಮನ್ವಯ ಸಭೆಗಳ ವಿವರಗಳು ಹಾಗೂ ಪಾಲಿಕೆಯ ಅನುಮತಿ ಇಲ್ಲದೆ ಸಿಗ್ನಲ್ ಅಳವಡಿಸಿದ್ದರೆ ಅದರ ಕಾನೂನುಬದ್ಧ ಅಧಿಕಾರದ ಮಾಹಿತಿಯನ್ನೂ ನೀಡುವಂತೆ ಕೋರಿದ್ದರು.
ಈ ಅರ್ಜಿಗೆ ಉತ್ತರಿಸಿರುವ ಮೈಸೂರು ಮಹಾನಗರ ಪಾಲಿಕೆಯ ಸಾರ್ವಜನಿಕ ಮಾಹಿತಿ ಅಧಿಕಾರಿ, ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ದಾಖಲೆಗಳು ಲಭ್ಯವಿಲ್ಲ ಎಂದು ತಿಳಿಸಿದ್ದಾರೆ.
ಪಾಲಿಕೆಯ ಈ ಉತ್ತರ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ, ನಗರದಲ್ಲಿ ಅಳವಡಿಸಲಾಗಿರುವ ಟ್ರಾಫಿಕ್ ಸಿಗ್ನಲ್‌ಗಳಿಗೆ ಸಂಬಂಧಿಸಿದ ಅನುಮತಿ ಪ್ರಕ್ರಿಯೆ, ದಾಖಲೆ ನಿರ್ವಹಣೆ ಹಾಗೂ ಸಂಬಂಧಿತ ಇಲಾಖೆಗಳ ಪಾತ್ರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.ಪಾಲಿಕೆ ಅನುಮತಿ ಇಲ್ಲದೆಯೇ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆಯೆ ಎಂಬ ಪ್ರಶ್ನೆ ಕಾಡುತ್ತಿದೆ.
ಆರ್‌ಟಿಐ ಅರ್ಜಿದಾರ ಹಿರಿಯ ವಕೀಲ ಅ.ಮ. ಭಾಸ್ಕರ್ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಹಾಗೂ ಇತರ ಸಂಬಂಧಿತ ಪ್ರಾಧಿಕಾರಗಳಿಂದಲೂ ಮಾಹಿತಿ ಪಡೆಯಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

