ನೂತನ ಪೊಲೀಸ್ ಚೌಕಿಗೆ ಎಸ್ಪಿ ಚಾಲನೆ

ಚಾಮರಾಜನಗರ: ಚಾ. ನಗರದ ಹೃದಯಭಾಗದ ಭುವನೇಶ್ವರಿ ವೃತ್ತದಲ್ಲಿ ನಿರ್ಮಿಸಲಾಗಿರುವ ನೂತನ ಪೊಲೀಸ್ ಚೌಕಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಅವರು ಚಾಲನೆ ನೀಡಿದರು.

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ದೊಡ್ಡದೊಡ್ಡ ಮಹಾನಗರಗಳಲ್ಲಿರುವಂತೆ ವೃತ್ತಾಕಾರದ ಆಕರ್ಷಕ ಮಾದರಿಯಲ್ಲಿ ನಗರದ ಭುವನೇಶ್ವರಿ ವೃತ್ತ (ಪಚ್ಚಪ್ಪ ಸರ್ಕಲ್) ಹಾಗೂ ಸಂತೇಮರಹಳ್ಳಿ ವೃತ್ತಗಳಲ್ಲಿ ನಿರ್ಮಿಸಿರುವ ಪೊಲೀಸ್ ಚೌಕಿ ಬಟನ್ ಆಪರೇಟ್ ಮಾಡುವ ಮೂಲಕ ಕಾರ್ಯಾರಂಭ ಮಾಡಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಅವರು ಪಟ್ಟಣದಲ್ಲಿ ಸಂಚಾರದಟ್ಟಣೆ ನಿಯಂತ್ರಿಸುವ ಸಮಯದಲ್ಲಿ ಮಳೆ ಬಂದರೆ ಸಂಚಾರಿ ಪೊಲೀಸರ ಕಾರ್ಯನಿರ್ವಹಣೆಗೆ ತೊಂದರೆಯಾಗುತ್ತಿದ್ದರಿಂದ ಸುಗಮ ನಿರ್ವಹಣೆಗೆ ನಗರದಲ್ಲಿ 2 ಹೊಸ ಪೊಲೀಸ್ ಚೌಕಿ ಹಾಗೂ ಹಳೆಯ ಚೌಕಿಗಳನ್ನು ನವೀಕರಣ ಮಾಡಲಾಗಿದೆ. ದೊಡ್ಡರಾಯಪೇಟೆ ಜಂಕ್ಷನ್‍ನಲ್ಲಿಯೂ ಪೊಲೀಸ್ ಚೌಕಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಕೊಳ್ಳೇಗಾಲ ಪಟ್ಟಣದಲ್ಲೂ ಸಂಚಾರದಟ್ಟಣೆ ನಿಯಂತ್ರಿಸಲು ಅನುಕೂಲವಾಗುವಂತೆ 3 ಹೊಸ ಪೊಲೀಸ್ ಚೌಕಿಗಳನ್ನು ಪ್ರಮುಖ ಸ್ಥಳಗಳಲ್ಲಿ ತೆರೆಯಲಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ನಾಗರಿಕರಿಗೆ ಸಂಚಾರಿ ನಿಯಮಗಳ ಪಾಲನೆ ಅರಿವು ನೀಡಿ ಕಾನೂನು ಸುವ್ಯವಸ್ಥೆ ಕಾಪಾಡಲಾಗುತ್ತಿದೆ ಎಂದು ‌ಹೇಳಿದರು.

ಪ್ರವಾಸಿತಾಣವಾಗಿರುವ ಜಿಲ್ಲೆಯ ಗಡಿಭಾಗ ಹಾಗೂ ಅಂತರ ರಾಜ್ಯ ಸಂಪರ್ಕ ಹೊಂದಿರುವ ಗುಂಡ್ಲುಪೇಟೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಅಲ್ಲಿಗೆ ಸಂಚಾರಿ ಪೊಲೀಸ್ ಠಾಣೆ ಮಂಜೂರಾಗಿದ್ದು, ಶೀಘ್ರ ಕಾರ್ಯ ಆರಂಭಿಸಲಿದೆ ಎಂದು ತಿಳಿಸಿದರು.

ಚಾಮರಾಜನಗರ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಂಚಾರಿ ನಿಯಮಗಳನ್ನು ಪ್ರದರ್ಶಿಸುವ ಡಿಸ್‍ಪ್ಲೇ ಬೋರ್ಡ್ ಅಳವಡಿಸಲಾಗುತ್ತದೆ. ಅಲ್ಲದೆ ಡಿಸ್‍ಪ್ಲೇ ಆಗುವ ಸಂಚಾರಿ ನಿಯಮಗಳನ್ನು ಮೈಕ್ ಮೂಲಕ ತಿಳಿಸಲಾಗುತ್ತದೆ. ಈಗಾಗಲೇ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ರಸ್ತೆ ಡುಬ್ಬಗಳನ್ನು ನಿರ್ಮಿಸಲಾಗಿದೆ. ಹಂಪ್ಸ್ ಗಳಿಗೆ ನಿಗದಿತ ಬಣ್ಣ ಬಳಿಯಲಾಗಿದೆ. ವಾಹನ ಸವಾರರು ಹೆಲ್ಮೆಟ್ ಧರಿಸಬೇಕು. ತ್ರಿಬಲ್ ರೈಡಿಂಗ್ ಮಾಡಬಾರದು ಹಾಗೂ ಕಾರು ಸವಾರರು ಸೀಟ್ ಬೆಲ್ಟ್ ಹಾಕಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಪೋಷಕರು ಸಹ ತಮ್ಮ ಮಕ್ಕಳಿಗೆ ಸಂಚಾರ ನಿಯಮಗಳ ಅರಿವು ಮೂಡಿಸಬೇಕು ಎಂದು ಎಸ್ಪಿ ಸಲಹೆ ನೀಡಿದರು.

ಮುಂದಿನ ಕೆಲ ದಿನಗಳಲ್ಲಿ ಪಟ್ಟಣದ ಮುಖ್ಯ ವೃತ್ತಗಳಲ್ಲಿ ಹಾಗೂ ಜನನಿಬಿಡ ಸ್ಥಳಗಳಲ್ಲಿ ಎ.ಎನ್.ಪಿ.ಆರ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ, ವಾಹನಸಂಖ್ಯೆಯನ್ನು ನಿಖರವಾಗಿ ಗುರುತಿಸಿ ಫೋಟೋ ಸಮೇತ ವರದಿ ಮಾಡಲಿವೆ. ಇದರಿಂದ ನಿಯಮ ಪಾಲಿಸದ ಯಾವುದೇ ವಾಹನ ಸವಾರರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟನಲ್ಲಿ ಪ್ರತಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಿ ಇತರರಿಗೂ ಅರಿವು ಮೂಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಅವರು ಸಲಹೆ ಮಾಡಿದರು.