ಮೈಸೂರು: ಸ್ವಾಮಿ ವಿವೇಕಾನಂದರ ಪವಿತ್ರ ಸ್ಮರಣಾರ್ಥ ನಿರ್ಮಿಸಲಾಗಿರುವ ವಿವೇಕ ಸ್ಮಾರಕ ವನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ಸಿಕ್ಕಿರುವುದು ನನ್ನ ಪುಣ್ಯ ಎಂದು ಪ್ರಧಾನಿ ನರೇಂದ್ರ ಮೋದಿಯವರು ನುಡಿದರು.
ಸ್ವಾಮಿ ವಿವೇಕಾನಂದರ ಪವಿತ್ರ ಸ್ಮರಣಾರ್ಥ ನಿರ್ಮಿಸಲಾಗಿರುವ ‘ವಿವೇಕ ಸ್ಮಾರಕ’ವನ್ನು ಲೋಕಾರ್ಪಣೆಗೊಳಿಸಿ ಮೋದಿ ಮಾತನಾಡಿದರು.
ಮೈಸೂರಿನ ಅಧಿದೇವತೆ, ತಾಯಿ ಶ್ರೀ ಚಾಮುಂಡೇಶ್ವರಿಗೆ ನನ್ನ ಅನಂತ ಪ್ರಣಾಮಗಳು, ಸಾಂಸ್ಕೃತಿಕ ನಗರಿ ಮೈಸೂರಿನ ಎಲ್ಲಾ ಸಹೋದರ ಮತ್ತು ಸಹೋದರಿಯರಿಗೆ ನನ್ನ ನಮಸ್ಕಾರಗಳು ಎಂದು ಮಾತು ಪ್ರಾರಂಭಿಸುತ್ತಿದ್ದಂತೆ ಜನತೆ ಚಪ್ಪಾಳೆ,ಹರ್ಷೋದ್ಘಾರದಿಂದ ಸ್ವಾಗತಿಸಿದರು.
ಇಂದು ಸ್ವಾಮಿ ವಿವೇಕಾನಂದರ ಪವಿತ್ರ ಸ್ಮರಣಾರ್ಥ ನಿರ್ಮಿಸಲಾಗಿರುವ ‘ವಿವೇಕ ಸ್ಮಾರಕ’ವನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ಸಿಕ್ಕಿರುವುದು ನನ್ನ ಪುಣ್ಯ ಎಂದು ಹೇಳಿದ ಪ್ರಧಾನಿಗಳು,ಮೈಸೂರಿನ ಮಣ್ಣಿಗೆ ಮತ್ತು ಇಲ್ಲಿನ ಜನರಿಗೆ ದೇಶದ ಸಾಂಸ್ಕೃತಿಕ ಜಾಗೃತಿಯಲ್ಲಿ ದೊಡ್ಡ ಇತಿಹಾಸವಿದೆ ಎಂದು ಬಣ್ಣಿಸಿದರು.
ಸ್ವಾಮಿ ವಿವೇಕಾನಂದರು ಚಿಕಾಗೋ ಸರ್ವಧರ್ಮ ಸಮ್ಮೇಳನಕ್ಕೆ ಹೋಗುವ ಮುನ್ನ ಮೈಸೂರಿಗೆ ಭೇಟಿ ನೀಡಿದ್ದನ್ನು ಪ್ರಧಾನಿಗಳು ಸ್ಮರಿಸಿದರು.
ಅಂದಿನ ಮೈಸೂರು ಮಹಾರಾಜರಾದ ಶ್ರೀ ಚಾಮರಾಜ ಒಡೆಯರ್ ಅವರು ವಿವೇಕಾನಂದರಿಗೆ ನೀಡಿದ ಆರ್ಥಿಕ ಮತ್ತು ನೈತಿಕ ಬೆಂಬಲವನ್ನು ಶ್ಲಾಘಿಸಿದರು.
೪೫ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಾಂಸ್ಕೃತಿಕ ಕೇಂದ್ರವು ಕೇವಲ ಕಟ್ಟಡವಲ್ಲ, ಇದು ಭಾರತದ ಯುವ ಶಕ್ತಿಗೆ ಪ್ರೇರಣೆ ನೀಡುವ ಜ್ಞಾನ ದೇಗುಲ ಎಂದು ಪ್ರಧಾನಿ ಹೇಳಿದರು.
ಶ್ರೀ ರಾಮಕೃಷ್ಣ ಆಶ್ರಮ ಪ್ರಕಟಿಸಿದ ಮಹರ್ಷಿ ವಾಲ್ಮೀಕಿ ರಾಮಾಯಣದ ೭ ಸಂಪುಟಗಳು ಮತ್ತು ‘ಬದುಕು ವೆದಕು’ ಎಂಬ ಕನ್ನಡ ಪುಸ್ತಕಗಳನ್ನು ಇದೇ ವೇಳೆ ಬಿಡುಗಡೆ ಮಾಡಿದ ಪ್ರಧಾನಿಗಳು ಖುಷಿ ಪಟ್ಟರು.
ಇಂದು ಭಾರತದ ಯುವಕರು ಸೆಮಿಕಂಡಕ್ಟರ್, ಸ್ಟಾರ್ಟ್‌ಅಪ್ ಹಾಗೂ ಡಿಜಿಟಲ್ ತಂತ್ರಜ್ಞಾನದಲ್ಲಿ ಜಗತ್ತನ್ನೇ ಆಳುತ್ತಿದ್ದಾರೆ. ಸ್ವಾಮಿ ವಿವೇಕಾನಂದರು ಅಂದು ಕಂಡ “ಭವ್ಯ ಭಾರತದ ಕನಸು” ಇಂದು ನನಸಾಗುತ್ತಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಸ್ಮರಿಸಿದ ಅವರು, ಭಾರತ ಮಾತೆಯ ಸೇವೆಯೇ ನಮ್ಮ ಏಕೈಕ ಆರಾಧ್ಯ ದೈವವಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೆ ಆಗಮಿಸುವ ಮೊದಲು ಹೆಲಿಪ್ಯಾಡ್‌ನಲ್ಲಿ ಪ್ರಧಾನಿ ಮೋದಿ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಹೂಗುಚ್ಛ ನೀಡಿ, ಶಾಲು ಹೊದಿಸಿ ಆತ್ಮೀಯವಾಗಿ ಬರಮಾಡಿಕೊಂಡರು.
ಈ ವೇಳೆ ಮುಖ್ಯ ಮಂತ್ರಿಗಳೊಂದಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಉಪಸ್ಥಿತರಿದ್ದು ಪ್ರಧಾನಿಗಳನ್ನು ಸ್ವಾಗತಿಸಿದರು.
ನಂತರ ಪ್ರಮುಖ ರಸ್ತೆಗಳಲ್ಲಿ ಪ್ರಧಾನಿ ಮೋದಿ ಅವರು ಭವ್ಯ ರೋಡ್ ಶೋ ನಡೆಸಿದರು. ರಸ್ತೆಯ ಇಕ್ಕೆಲಗಳಲ್ಲೂ ಸಾವಿರಾರು ಜನರು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೋದಿಯವರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.


