ಮುದ್ದೇಗೌಡನಹುಂಡಿ ದರೋಡೆ ಪ್ರಕರಣ: 4 ಆರೋಪಿಗಳು ಅರೆಸ್ಟ್

ಮೈಸೂರು: ಮೈಸೂರು ತಾಲೂಕಿನ ವರುಣ ಹೋಬಳಿ, ಮುದ್ದೇಗೌಡನಹುಂಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ದರೋಡೆ ಮಾಡಿದ್ದ ಪ್ರಕರಣವನ್ನು ಮೈಸೂರು ಗ್ರಾಮಾಂತರ ಪೊಲೀಸರು ಭೇದಿಸಿ,ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಕಾರ್ತಿಕ್.ಕೆ.ಎಂ, ಆನಂದ್.ಎನ್, ಪುರುಷೋತ್ತಮ್.ಎಸ್.ಎಸ್, ಸಿದ್ದರಾಜು ಬಂಧಿತ ಆರೋಪಿಗಳು.

ಜುಲೈ 15 ರಂದು ರಾತ್ರಿ 8:30 ರಲ್ಲಿ ಮುದ್ದೇಗೌಡನಹುಂಡಿ ಗ್ರಾಮದ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ರಾಮು ಎಂಬವರನ್ನು ನಾಲ್ಕು ಮಂದಿ ಕಾರಿನಲ್ಲಿ ಅಡ್ಡಗಟ್ಟಿ ಅಪಹರಿಸಿದ್ದರು.

ನಂತರ 30 ಗ್ರಾಂ ಚಿನ್ನದ ಸರ, 2 ಉಂಗುರ ಮತ್ತು 50 ಸಾವಿರ ದೋಚಿ, ಬಿಡುಗಡೆಗೆ 40 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ನಂತರ 16 ಲಕ್ಷ ರೂ. ಪಡೆದು ರಾಮು ಅವರನ್ನು ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ವರುಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರ ಮಾರ್ಗದರ್ಶನದಲ್ಲಿ, ಗ್ರಾಮಾಂತರ ಡಿವೈಎಸ್‌ಪಿ ರಾಜಣ್ಣ ನೇತೃತ್ವದಲ್ಲಿ ಸಿಪಿಐ ಡಿ.ಬಿ.ಜಯಪ್ರಕಾಶ್ ಮತ್ತು ವರುಣ ಪಿಎಸ್‌ಐ ಸದಾಶಿವ ತಿಪ್ಪರಡ್ಡಿ ತಂಡವು ತನಿಖೆ ನಡೆಸಿ,ಆರೋಪಿಗಳ ಪತ್ತೆಗೆ ಬಲೆ ಬೀಸಿತ್ತು.

ವೈಜ್ಞಾನಿಕ ಮಾಹಿತಿ ಆಧರಿಸಿ ಜು.26 ರಂದು ಕಾರ್ತಿಕ್.ಕೆ.ಎಂ ಮತ್ತು ಆನಂದ್.ಎನ್, ಜು.28ಕ್ಕೆ ಪುರುಷೋತ್ತಮ್.ಎಸ್.ಎಸ್ ಹಾಗೂ ಆ.4 ರಂದು ಸಿದ್ದರಾಜು ಅವರನ್ನು ಬಂಧಿಸಲಾಗಿದೆ.

ವಿಚಾರಣೆ ವೇಳೆ ಆರೋಪಿಗಳು 2025 ನವೆಂಬರ್‌ನಲ್ಲಿ ಕುಪ್ಪೇಗಾಲ ಗ್ರಾಮದ ರವಿಯನ್ನು ಅಪಹರಿಸಿ 18 ಲಕ್ಷ, ಮತ್ತು 5 ತಿಂಗಳ ಹಿಂದೆ ಕುಪ್ಪೇಗಾಲದ ಸುರೇಶ್ ಅವರನ್ನು ದೇವನಹಳ್ಳಿ ಬಳಿ ಅಪಹರಿಸಿ 5 ಲಕ್ಷ ಪಡೆದಿದ್ದಾಗಿ ಬಾಯಿಬಿಟ್ಟಿದ್ದಾರೆ.

ಆರೋಪಿಗಳಿಂದ 4,30,000 ರೂ, ಮಾರುತಿ ಸ್ವಿಫ್ಟ್ ಡಿಸೈರ್ ಕಾರು, ಹೋಂಡಾ ಶೈನ್ ಬೈಕ್, ಹೋಂಡಾ ಆಕ್ಟಿವಾ ಮತ್ತು 5 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.