ಮೈಸೂರಿನಲ್ಲಿ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ: ತನ್ವೀರ್ ಸೇಠ್ ಚಾಲನೆ

ಮೈಸೂರು: ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಪ್ರವಾಸಿಗರ ಸ್ವಾಗತಕ್ಕೆ ವೈಟ್ ಟಾಪಿಂಗ್ ರಸ್ತೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

ನಗರದ ಮಣಿಪಾಲ್ ವೃತ್ತದಿಂದ ಮಿಲೇನಿಯಂ ವೃತ್ತದವರೆಗಿನ 2.2 ಕಿ.ಮೀ ಉದ್ದದ ವೈಟ್ ಟಾಪಿಂಗ್ ರಸ್ತೆ ಕಾಮಗಾರಿಗೆ ಎನ್.ಆರ್. ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡ ನಂತರ ಮೈಸೂರು ರಾಜ್ಯದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಸಾಂಸ್ಕೃತಿಕ, ಪಾರಂಪರಿಕ ಹಾಗೂ ಪ್ರವಾಸಿ ತಾಣವಾಗಿರುವ ಮೈಸೂರಿಗೆ ದಸರಾ ಸಂದರ್ಭದಲ್ಲಿ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ,ಇದರಿಂದಾಗಿ ವಾಹನ ದಟ್ಟಣೆ ಹೆಚ್ಚಾಗಲಿದ್ದು, ಸಂಚಾರ ಸುಗಮಗೊಳಿಸಲು ವೈಟ್ ಟಾಪಿಂಗ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 12 ಪ್ರಮುಖ ರಸ್ತೆಗಳಿಗೆ ವೈಟ್ ಟಾಪಿಂಗ್ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಮೂಲಕ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಸಾಮೂಹಿಕ ಶಂಕುಸ್ಥಾಪನೆ ನಡೆದಿದ್ದು, ತಾಂತ್ರಿಕ ವರದಿ ಸಿದ್ಧವಾದ ನಂತರ ದಸರಾ ಹಬ್ಬಕ್ಕೂ ಮುನ್ನ ಪೂರ್ಣಗೊಳಿಸಬಹುದಾದ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಎನ್.ಆರ್. ಕ್ಷೇತ್ರದಲ್ಲಿ ಮೂರು ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲಾಗುತ್ತಿದೆ. ಮಣಿಪಾಲ್ ವೃತ್ತದಿಂದ ಮಿಲೇನಿಯಂ ವೃತ್ತದವರೆಗಿನ ಕಾಮಗಾರಿಯನ್ನು ದಸರಾ ಮುನ್ನವೇ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆಅನುವು ಮಾಡಲಾಗುವುದು ಎಂದು ತಿಳಿಸಿದರು.

ಮೈಸೂರು ನಗರ ವ್ಯಾಪ್ತಿಯ 12 ಪ್ರಮುಖ ರಸ್ತೆಗಳಲ್ಲಿ ಒಟ್ಟು 46.088 ಕಿ.ಮೀ ಉದ್ದಕ್ಕೆ ರೂ. 393.85 ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ. ಇದರಲ್ಲಿ ಮೊದಲ ಹಂತದಲ್ಲಿ ರೂ. 121 ಕೋಟಿ ಮೀಸಲಿಡಲಾಗಿದ್ದು, ರೂ. 67 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ವೈಟ್ ಟಾಪಿಂಗ್‌ನಿಂದ ನಿರ್ವಹಣಾ ವೆಚ್ಚ ಕಡಿಮೆಯಾಗಿ ರಸ್ತೆಯ ಬಾಳಿಕೆ ಮತ್ತು ಸಂಚಾರ ಗುಣಮಟ್ಟ ಉತ್ತಮವಾಗಿರುತ್ತದೆ ಎಂದು ತನ್ವೀರ್‌ಸೇಠ್ ತಿಳಿಸಿದರು.

ಈ ಕಾಮಗಾರಿಯಲ್ಲಿ ವೈಟ್ ಟಾಪಿಂಗ್ ಕ್ಯಾರೇಜ್-ವೇ, ಒಳಚರಂಡಿ, ಕುಡಿಯುವ ನೀರು ಸರಬರಾಜು ಮತ್ತು ವಿದ್ಯುತ್ ಕೇಬಲ್ ಅಳವಡಿಕೆಗೆ ಬಫರ್ ಝೋನ್, ಪಾದಚಾರಿಗಳಿಗೆ ಫುಟ್‌ಪಾತ್, ಮಳೆ ನೀರು ಸರಾಗವಾಗಿ ಹರಿಯಲು ಆರ್.ಸಿ.ಸಿ ಚರಂಡಿ ಮತ್ತು ಕಲ್ವರ್ಟ್ ನಿರ್ಮಾಣ, ರಸ್ತೆ ವಿಭಜಕಗಳಲ್ಲಿ ಪಾರಂಪರಿಕ ವಿದ್ಯುತ್ ದೀಪಗಳ ಅಳವಡಿಕೆ, ಹಾಲಿ ಇರುವ ನೀರು ಸರಬರಾಜು ಮತ್ತು ಒಳಚರಂಡಿ ಕೊಳವೆ ಮಾರ್ಗಗಳ ಸ್ಥಳಾಂತರ ಸೇರಿದಂತೆ ವಿವಿಧ ಕಾಮಗಾರಿಗಳು ಸೇರಿವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಇಕ್ಬಾಲ್, ಕೆಪಿಸಿಸಿ ಸಂಯೋಜಕ ಶೌಕತ್ ಅಲಿಖಾನ್, ಮುಖಂಡರಾದ ಅಜೀಜ್ ಸೇಠ್, ಮಜೀದ್ ಅಹಮದ್, ನಬಿಜಾನ್, ನೂರ್ ಅಹಮದ್, ಅಬ್ದುಲ್ ವಸೀಂ, ಇರ್ಫಾನ್, ಸೈಯದ್ ಫಾರೂಕ್, ಅಫ್ತಾಬ್ ಅಫು, ಅಕ್ಮಲ್, ಶಾಕಿರಾ ಬೇಗಂ, ಎನ್. ಮಾದೇಗೌಡ, ಪ್ರದೀಪ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.