ಪಾದಚಾರಿ ಮಾರ್ಗ ತೆರವಿಗೆ ಲಕ್ಷ್ಮಣ್ ವಿರೋಧ

ಮೈಸೂರು: ಬೀದಿ ಬದಿ ವ್ಯಾಪಾರಿಗಳನ್ನು ಏಕಾಏಕಿ ತೆರವುಗೊಳಿಸುತ್ತಿರುವ ಮೈಸೂರು ಮಹಾನಗರ ಪಾಲಿಕೆಯ ಕ್ರಮಕ್ಕೆ ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ವಿರೋಧ ವ್ಯಕ್ತಪಡಿಸಿದ್ದಾರೆ.

ಜಲದರ್ಶಿನಿಯಲ್ಲಿ ನಡೆದ ಸಭೆಯಲ್ಲಿ 100ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಪಾಲಿಕೆಯ ತೆರವು ಕಾರ್ಯದಿಂದ ಜೀವನಕ್ಕೆ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡರು.

ವ್ಯಾಪಾರಿಗಳ ಅಳಲು ಆಲಿಸಿ ಮಾತನಾಡಿದ ಲಕ್ಷ್ಮಣ್,ಸರ್ಕಾರದ ಆದೇಶವಿದ್ದರೆ ತೋರಿಸಲಿ ಎಂದು ಆಗ್ರಹಿಸಿದರು. ಬಡ ವ್ಯಾಪಾರಿಗಳಿಗೆ ಪರ್ಯಾಯ ಜಾಗ ಕಲ್ಪಿಸಿದ ಬಳಿಕವೇ ತೆರವು ಕಾರ್ಯ ನಡೆಸಬೇಕು ಎಂದು ಒತ್ತಾಯಿಸಿದರು.

ಹೈಕೋರ್ಟ್ ಮಾರ್ಗಸೂಚಿಯಂತೆ 15 ಅಡಿ ಪಾದಚಾರಿ ಮಾರ್ಗದಲ್ಲಿ 3 ಅಡಿ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಹೂ, ಹಣ್ಣು, ತರಕಾರಿ ಸೇರಿದಂತೆ ಸಣ್ಣ ವ್ಯಾಪಾರಿಗಳನ್ನೇ ಗುರಿಯಾಗಿಸುವುದು ಸರಿಯಲ್ಲ ಎಂದು ಹೇಳಿದರು.

ಗುರುತಿನ ಚೀಟಿ ಹಾಗೂ ಶುಲ್ಕ ಪಡೆದಿದ್ದರೂ ತೆರವುಗೊಳಿಸಲಾಗುತ್ತಿದೆ ಎಂದು ವ್ಯಾಪಾರಿಗಳು ಆರೋಪಿಸಿದರು.