ಉತ್ತಮ ವಿಮಾನ ಸಂಪರ್ಕ ಮತ್ತು ವಿಮಾನ ನಿಲ್ದಾಣ ವಿಸ್ತರಣೆಗೆ ಯದುವೀರ್ ಆಗ್ರಹ

ಮೈಸೂರು: ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಸಮಾಲೋಚನಾ ಸಮಿತಿ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡು ವಹಿಸಿದ್ದರು. ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಹಾಗೂ ಸಮಾಲೋಚನಾ ಸಮಿತಿಯ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರಿನ ವಿಮಾನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವಂತೆ ಒತ್ತಾಯಿಸಿ, ನಾಗರಿಕ ವಿಮಾನಯಾನ ಸಚಿವರಿಗೆ ವಿವರವಾದ ಮನವಿ ಪತ್ರ ಸಲ್ಲಿಸಿದರು.

ಮೈಸೂರಿನಿಂದ ಮುಂಬೈ, ಕೊಚ್ಚಿ, ತಿರುಪತಿ ಹಾಗೂ ಗೋವಾ ಸೇರಿದಂತೆ ಪ್ರಮುಖ ದೇಶೀಯ ನಗರಗಳಿಗೆ ನೇರ ವಿಮಾನ ಸಂಪರ್ಕ ಕಲ್ಪಿಸುವಂತೆ ಅವರು ಮನವಿ ಮಾಡಿದರು.

ಮೈಸೂರು ಕರ್ನಾಟಕದ ಪ್ರಮುಖ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ತಾಣವಾಗಿದ್ದು, ಉತ್ತಮ ವಿಮಾನ ಸಂಪರ್ಕವು ಪ್ರವಾಸೋದ್ಯಮ, ವ್ಯಾಪಾರ, ಶಿಕ್ಷಣ, ಆರೋಗ್ಯ ಸೇವೆ ಹಾಗೂ ಹೂಡಿಕೆ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಿದೆ ಎಂದು ಯದುವೀರ್ ಮನದಟ್ಟು ಮಾಡಿದರು.

ಮೈಸೂರು ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವಂತೆ ಸಂಸದರು ಸಚಿವರನ್ನು ಒತ್ತಾಯಿಸಿದರು.

ವಿಮಾನ ನಿಲ್ದಾಣದ ವಿಸ್ತರಣಾ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು ಅತ್ಯಂತ ಅಗತ್ಯವಾಗಿದ್ದು, ಇದರಿಂದ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ನಿರ್ವಹಿಸುವುದರ ಜೊತೆಗೆ ಹೆಚ್ಚಿನ ವಿಮಾನ ಮಾರ್ಗಗಳು ಹಾಗೂ ದೊಡ್ಡ ವಿಮಾನಗಳ ಕಾರ್ಯಾಚರಣೆಗೆ ಅವಕಾಶ ದೊರೆಯಲಿದೆ ಎಂದು ಅವರು ಹೇಳಿದರು.

ಮೈಸೂರಿಗೆ ತಾತ್ಕಾಲಿಕ ಅಥವಾ ಅಲ್ಪಾವಧಿಯ ವಿಮಾನ ಸಂಪರ್ಕ ಪರಿಹಾರಗಳ ಬದಲಾಗಿ ದೀರ್ಘಕಾಲೀನ ವಿಮಾನಯಾನ ಕಾರ್ಯತಂತ್ರ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಇದಕ್ಕೆ ಸ್ಪಂದಿಸಿ ಮಾತನಾಡಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡು ಅವರು ಮೈಸೂರಿಗೆ ಉತ್ತಮ ವಿಮಾನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಭರವಸೆ ನೀಡಿದರು.

ಮೈಸೂರಿಗೆ ಇನ್ನಷ್ಟು ಉತ್ತಮ ವಿಮಾನ ಸಂಪರ್ಕದ ಅಗತ್ಯವಿದೆ. ಮೈಸೂರಿಗೆ ಶೀಘ್ರದಲ್ಲೇ ಅದರ ಯೋಗ್ಯ ಪಾಲು ದೊರೆಯಲಿದೆ ಎಂಬ ವಿಶ್ವಾಸ ನನಗಿದೆ. ಸಂಸದ ಯದುವೀರ್ ಜೀ ಅವರು ಎಲ್ಲಾ ರೀತಿಯ ಸಹಕಾರಕ್ಕಾಗಿ ನನ್ನೊಂದಿಗೆ ನಿರಂತರವಾಗಿ ಅನುಸರಣೆ ಮಾಡುತ್ತಿದ್ದಾರೆ. ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ನನ್ನ ಕಚೇರಿಗೆ ನಿರ್ದೇಶನ ನೀಡುತ್ತೇನೆ ಎಂದು ತಿಳಿಸಿದರು.

ಮೈಸೂರಿಗೆ ಆಗಮಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವರು, ನಾಗರಿಕ ವಿಮಾನಯಾನ ರಾಜ್ಯ ಸಚಿವರು ಹಾಗೂ ಸಮಾಲೋಚನಾ ಸಮಿತಿಯ ಸದಸ್ಯರು ಶುಕ್ರವಾರ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.