ಮೈಸೂರು: ದೇವರಾಜ ಮಾರುಕಟ್ಟೆಯನ್ನು ಕೆಡವದೆ ಸಂರಕ್ಷಿಸಿ ಅಭಿವೃದ್ಧಿಪಡಿಸಬೇಕು ಎಂಬ ಸುಪ್ರೀಂ ಕೋರ್ಟ್‌ನ ನಿಲುವಿಗೆ ತಾವು ಸಹಮತ ವ್ಯಕ್ತಪಡಿಸುವುದಾಗಿ ಮೈಸೂರು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಮೈಕಾ ಪ್ರೇಮ್ ಕುಮಾರ್ ತಿಳಿಸಿದ್ದಾರೆ.
ದೇವರಾಜ ಮಾರ್ಕೆಟ್ ಮುಂಭಾಗ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ವರಮಹಾಲಕ್ಷ್ಮೀ ಹಬ್ಬದ ವ್ಯಾಪಾರ ವಹಿವಾಟಿನ ಸಂದರ್ಭದಲ್ಲಿ ದೇವರಾಜ ಮಾರುಕಟ್ಟೆಯಲ್ಲಿ ಉಂಟಾದ ಪರಿಸ್ಥಿತಿ ಅತ್ಯಂತ ದುಃಖಕರವಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆ ಆಯುಕ್ತರು, ವಲಯ ಕಚೇರಿ ಸಹಾಯಕ ಆಯುಕ್ತರು ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳೇ ಇದ್ದರೂ, ಮಾರುಕಟ್ಟೆಗೆ ಆಗಮಿಸುವ ಮಹಿಳೆಯರಿಗೆ ಮುಕ್ತವಾಗಿ ಸಂಚರಿಸಿ ವ್ಯಾಪಾರ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.
ವ್ಯಾಪಾರಿಗಳಿಗೆ ನಿಗದಿಪಡಿಸಿರುವ ಸ್ಥಳವನ್ನು ಮೀರಿ ನಾಲ್ಕೈದು ಅಡಿ ಜಾಗದಲ್ಲಿಯೂ ಸರಕುಗಳನ್ನು ಇಟ್ಟು ವ್ಯಾಪಾರ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ, ಅದರಲ್ಲೂ ಮಹಿಳೆಯರಿಗೆ, ಸಂಚರಿಸಲು ತೀವ್ರ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಗೌರಿ-ಗಣೇಶ ಹಬ್ಬ ಸೇರಿದಂತೆ ಹಲವು ಪ್ರಮುಖ ಹಬ್ಬಗಳು ಬರಲಿರುವ ಹಿನ್ನೆಲೆಯಲ್ಲಿ, ದೇವರಾಜ ಮಾರುಕಟ್ಟೆಯಲ್ಲಿ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಮಹಿಳಾ ಅಧಿಕಾರಿಗಳೇ, ಮಹಿಳೆಯರ ಸುರಕ್ಷತೆ ಮತ್ತು ಅನುಕೂಲದ ಬಗ್ಗೆ ನಿಮಗೆ ಜವಾಬ್ದಾರಿ ಇದೆಯೇ ಎಂದು ಪ್ರಶ್ನಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಕೂಡ ದೇವರಾಜ ಮಾರುಕಟ್ಟೆಯ ಒಳಗೆ ಹಾಗೂ ಹೊರಗೆ ಸ್ವತಃ ಸಂಚರಿಸಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ತಳ್ಳುಗಾಡಿ ವ್ಯಾಪಾರದ ಹೆಸರಿನಲ್ಲಿ ಕೆಲವರು ಸಾರ್ವಜನಿಕರು ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮೀಸಲಾಗಿರುವ ಸ್ಥಳಗಳನ್ನೂ ಆಕ್ರಮಿಸಿಕೊಂಡಿದ್ದಾರೆ. ಬಡ ವ್ಯಾಪಾರಿಗಳ ಜೀವನೋಪಾಯಕ್ಕೆ ತೊಂದರೆ ನೀಡಬಾರದು ಎಂಬುದು ನಮ್ಮ ನಿಲುವು,ಆದರೂ, ಬಂಡವಾಳ ಹೂಡಿ ಹಲವರನ್ನು ಕೆಲಸಕ್ಕೆ ನೇಮಿಸಿಕೊಂಡು ವ್ಯಾಪಾರ ನಡೆಸುತ್ತಿರುವವರಿಗೂ ಇದೇ ರೀತಿಯ ಸೌಲಭ್ಯ ನೀಡುವುದು ಸರಿಯಲ್ಲ ಎಂದು ಅವರು ಹೇಳಿದರು.
ದೇವರಾಜ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ಅಂಗಡಿಗಳನ್ನು ವಿಸ್ತರಿಸಿರುವುದು ಕಂಡುಬರುತ್ತಿದೆ. ಇದರಿಂದ ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸುವಂತಾಗಿದೆ. ಹೀಗಾಗಿ, ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಜಂಟಿಯಾಗಿ ಅತಿಕ್ರಮಣ ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಗ್ರಾಹಕರು ಬಂದಾಗ ಮಾತ್ರ ವ್ಯಾಪಾರ ನಡೆಯುತ್ತದೆ. ಆದರೆ, ಗ್ರಾಹಕರೇ ಮಾರುಕಟ್ಟೆಗೆ ಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾದರೆ, ಅದರಿಂದ ವ್ಯಾಪಾರಿಗಳಿಗೂ ನಷ್ಟವಾಗುತ್ತದೆ” ಎಂದು ವ್ಯಾಪಾರಿಗಳಿಗೂ ತಿಳಿಹೇಳಿದರು.
ದೇವರಾಜ ಪೊಲೀಸ್ ಠಾಣೆಯ ಅಧಿಕಾರಿಗಳು, ಸಂಚಾರ ವಿಭಾಗ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಅಧಿಕಾರಿಗಳು ಫುಟ್‌ಪಾತ್ ಅತಿಕ್ರಮಣದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಬಡ ಫುಟ್‌ಪಾತ್ ವ್ಯಾಪಾರಿಗಳ ಮೇಲೆ ಮಾತ್ರ ದೌರ್ಜನ್ಯ ನಡೆಸದೆ, ವ್ಯವಸ್ಥಿತವಾಗಿ ಅತಿಕ್ರಮಣ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವವರ ವಿರುದ್ಧವೂ ಸಮಾನವಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಮೈಕಾ ಆಗ್ರಹಿಸಿದರು.
ಜನಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಮುಖಂಡರು ಮತದ ಉದ್ದೇಶದಿಂದ ಎಲ್ಲರನ್ನೂ ಓಲೈಸುವ ಬದಲು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ, ಮೈಸೂರಿನ ಸ್ವಚ್ಛತೆ, ಸೌಂದರ್ಯ ಹಾಗೂ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಅವರು ಎಚ್ಚರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಮೈಸೂರಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ದೇವರಾಜ ಮಾರುಕಟ್ಟೆಯನ್ನು ಹಾಳಾಗದಂತೆ ಸಂರಕ್ಷಿಸುವುದರ ಜೊತೆಗೆ, ವ್ಯಾಪಾರಿಗಳು ತಮ್ಮ ನಿಗದಿತ ಸ್ಥಳದಲ್ಲಿಯೇ ವ್ಯಾಪಾರ ನಡೆಸುವಂತೆ ಕ್ರಮ ಕೈಗೊಂಡರೆ ಮೈಸೂರಿಗೆ ಉತ್ತಮ ಹೆಸರು ಬರಲಿದೆ ಎಂದು ಮೈಕಾ ಪ್ರೇಮ್ ಕುಮಾರ್ ಹೇಳಿದರು.
ದೇವರಾಜ ಮಾರುಕಟ್ಟೆಯಲ್ಲಿ ಮಹಿಳೆಯರು ಹಾಗೂ ಸಾರ್ವಜನಿಕರು ಮುಕ್ತವಾಗಿ ಸಂಚರಿಸಿ, ಯಾವುದೇ ತೊಂದರೆಯಿಲ್ಲದೆ ವ್ಯಾಪಾರ ಮಾಡಲು ಅನುಕೂಲವಾಗುವಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜನಪ್ರತಿನಿಧಿಗಳನ್ನು ಒತ್ತಾಯಿಸಿದರು.

