ಅನಧಿಕೃತ ನಿಲುಗಡೆ ಮಾಡಿದ 382 ವಾಹನಗಳಿಗೆ ನೋಟಿಸ್

ಮೈಸೂರು: ಮೈಸೂರು ನಗರದ ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ಅನಧಿಕೃತವಾಗಿ ನಿಲುಗಡೆ ಮಾಡಿರುವ ಹಾಗೂ ಬಳಕೆಯಲ್ಲಿಲ್ಲದ ವಾಹನಗಳನ್ನು ತೆರವುಗೊಳಿಸಲು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಕ್ರಮ ಕೈಗೊಂಡಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 382 ಪರಿತ್ಯಕ್ತ/ಅನುಪಯುಕ್ತ ವಾಹನಗಳನ್ನು ಗುರುತಿಸಲಾಗಿದೆ,ಈ ವಾಹನಗಳ ಮೇಲೆ ನೋಟಿಸ್ ಅಂಟಿಸುವ ಕಾರ್ಯಕ್ಕೆ ಇಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಸವಿತಾ ಎಂ.ಕೆ. ಅವರು ಚಾಲನೆ ನೀಡಿದರು.

ಸಾರ್ವಜನಿಕ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ಇಂತಹ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗುವುದರೊಂದಿಗೆ, ನಗರದ ಸ್ವಚ್ಛತೆ ಮತ್ತು ಸೌಂದರ್ಯಕ್ಕೂ ಧಕ್ಕೆಯಾಗಿದೆ.

ಅಲ್ಲದೆ ಕೆಲವು ವಾಹನಗಳು ತ್ಯಾಜ್ಯ ಸಂಗ್ರಹಣೆ, ಅಕ್ರಮ ಚಟುವಟಿಕೆ ಹಾಗೂ ಸೊಳ್ಳೆ ಸೇರಿದಂತೆ ರೋಗವಾಹಕಗಳ ಉತ್ಪತ್ತಿಗೆ ಕಾರಣವಾಗುವ ಸಾಧ್ಯತೆಯಿದ್ದು,
ನೋಟಿಸ್ ಅಂಟಿಸಿದ ದಿನಾಂಕದಿಂದ 7 ದಿನಗಳೊಳಗೆ ಸಂಬಂಧಪಟ್ಟ ವಾಹನದ ಮಾಲೀಕರು ತಮ್ಮ ವಾಹನವನ್ನು ಸ್ಥಳದಿಂದ ತೆರವುಗೊಳಿಸಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.

ನಿಗದಿತ ಅವಧಿಯೊಳಗೆ ವಾಹನವನ್ನು ತೆರವುಗೊಳಿಸದಿದ್ದಲ್ಲಿ ವಾಹನವನ್ನು ಪರಿತ್ಯಕ್ತ/ಅನುಪಯುಕ್ತ ವಾಹನವೆಂದು ಪರಿಗಣಿಸಿ ಟೋಯಿಂಗ್ ಮೂಲಕ ತೆರವುಗೊಳಿಸಲಾಗುವುದು. ವಾಹನ ತೆರವು ಹಾಗೂ ಸಾಗಾಣಿಕೆ ವೆಚ್ಚವನ್ನು ಸಂಬಂಧಪಟ್ಟ ವಾಹನದ ಮಾಲೀಕರಿಂದ ವಸೂಲಿ ಮಾಡಲಾಗುವುದು. ಅಗತ್ಯವಿದ್ದಲ್ಲಿ ವಾಹನವನ್ನು ಹರಾಜು ಅಥವಾ ಸ್ಕ್ರ್ಯಾಪ್ ಮಾಡುವ ಕ್ರಮವನ್ನೂ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು (ಪರಿಸರ), ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು ಹಾಗೂ ಮೇಲ್ವಿಚಾರಕರು ಉಪಸ್ಥಿತರಿದ್ದರು.