ಮೈಸೂರು: ಬುಡಕಟ್ಟು ಭಾಷೆ, ಸಂಸ್ಕೃತಿ ಸಂರಕ್ಷಣೆಗೆ ರಾಷ್ಟ್ರೀಯ ಸಂಕಲ್ಪ ಅಗತ್ಯವಾಗಿದೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ದುರ್ಗಾದಾಸ್ ಉಯಿಕಿ ಹೇಳಿದರು.
ನಗರದ ಸದರ್ನ್ ಸ್ಟಾರ್ ಹೋಟೆಲ್‌ನಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ‘ಬುಡಕಟ್ಟು ಭಾಷೆಗಳು ಮತ್ತು ವಸ್ತು ಸಂಗ್ರಹಾಲಯಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಪರಂಪರೆಯಲ್ಲಿ ಪ್ರಕೃತಿ ಮತ್ತು ಅರಣ್ಯ ಸಂಸ್ಕೃತಿಗೆ ವಿಶೇಷ ಸ್ಥಾನವಿದೆ. ಬುಡಕಟ್ಟು ಭಾಷೆಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ದಾಖಲಿಸಿ ಸಂರಕ್ಷಿಸುವುದು ದೇಶದ ಸಾಂಸ್ಕೃತಿಕ ಪರಂಪರೆ ಉಳಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಬುಡಕಟ್ಟು ಸಮುದಾಯಗಳು ಮಾನವ ನಾಗರಿಕತೆಯ ಪ್ರಾಚೀನ ಜ್ಞಾನದ ಸಂರಕ್ಷಕರು ಎಂದು ಹೇಳಿದರು.
ಬುಡಕಟ್ಟು ಭಾಷೆ ನಶಿಸಿದರೆ ಸಂಸ್ಕೃತಿ, ಪರಂಪರೆ ಮತ್ತು ಪಾರಂಪರಿಕ ಜ್ಞಾನವೂ ನಷ್ಟವಾಗುತ್ತದೆ. ಆದ್ದರಿಂದ ದಾಖಲಾತಿ, ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ಆದ್ಯತೆ ನೀಡಬೇಕು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಟಿ. ರಘುಮೂರ್ತಿ ತಿಳಿಸಿದರು.
ಕರ್ನಾಟಕದಲ್ಲಿ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಬೇಕು. ಆಗ ಮಾತ್ರ ವಿಕಸಿತ ಭಾರತದ ಗುರಿ ಸಾಕಾರವಾಗುತ್ತದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಅನಂತ್ ಪ್ರಕಾಶ್ ಪಾಂಡೆ, ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ, ಇಲಾಖಾ ಕಾರ್ಯದರ್ಶಿ ಕನಗವಲ್ಲಿ, ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಬಸವರಾಜ್ ಕೋಡಗುಂಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

