ಗಜಪಯಣಕ್ಕೆ ನಾಳೆ ಅದ್ಧೂರಿ ಚಾಲನೆ

ವೀರನಹೊಸಹಳ್ಳಿ: ನಾಡಹಬ್ಬ ಮೈಸೂರು ದಸರಾ ಸಂಭ್ರಮಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಗಜಪಯಣಕ್ಕೆ ನಾಳೆ (ಆ.26) ಅದ್ಧೂರಿ ಚಾಲನೆ ಸಿಗಲಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನಹೊಸಹಳ್ಳಿ ಮುಖ್ಯದ್ವಾರದ ಮುಂಭಾಗ ನಾಳೆ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಗಜಪಡೆಗೆ ಪುಷ್ಪಾರ್ಚನೆ ಮಾಡಿ ಸಾಂಪ್ರದಾಯಿಕ ಪೂಜೆ ನೆರವೇರಿಸಿ ಚಾಲನೆ ನೀಡಲಿದ್ದಾರೆ.

ಈ ಬಾರಿ ಗಜಪಯಣಕ್ಕೆ ಹೊಸ ರೂಪ ನೀಡಲಾಗಿದೆ, ಸುಮಾರು 6 ಸಾವಿರ ಜನರು, ಪ್ರವಾಸಿಗರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಮಹಿಳಾ ಸಂಘಟನೆಗಳಿಂದ ಗಜಪಡೆಗೆ ಅಭೂತಪೂರ್ವ ಸ್ವಾಗತ ಕೋರುತ್ತುರುವುದು ವಿಶೇಷ.

ಸ್ವಾಗತಕ್ಕೆ 15ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಸಜ್ಜಾಗಿವೆ. ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ, ಆದಿವಾಸಿ ನೃತ್ಯ, ಟಿಬೆಟಿಯನ್ ನೃತ್ಯ, ಗೊರವರ ಕುಣಿತ, ಜೇನುಕುರುಬ ಮತ್ತು ಕಾಡು ಕುರುಬರ ಕುಣಿತದೊಂದಿಗೆ ಆನೆಗಳನ್ನು ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಗುತ್ತದೆ.

ಮೊದಲ ಹಂತದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸಲಿವೆ, ಎರಡನೇ ಹಂತದಲ್ಲಿ ಮಹೇಂದ್ರ, ಗೋಪಿ ಸೇರಿದಂತೆ 7 ಆನೆಗಳು ಬರಲಿವೆ. ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದ್ದು ರಸ್ತೆ ಬದಿಯ ಗಿಡಗಂಟಿಗಳ ತೆರವು ಕಾರ್ಯ ಪೂರ್ಣಗೊಂಡಿದೆ,ಮುಖ್ಯ ಧ್ವಾರ‌ ಶೃಂಗಾರ ಗೊಂಡಿದೆ.