ಹಾಸನ: ಯಾವುದೊ ವಿಡಿಯೋ, ಜೈಲಿನ ವಿಷಯ ಇಟ್ಟುಕೊಂಡು ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದರು.
ಹೊಳೆನರಸೀಪುರ ತಾಲೂಕಿನ ಹರದನ ಹಳ್ಳಿಯ ಮಾವಿನಕೆರೆ ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ತಮ್ಮ ತಾಯಿಯ ಸ್ಮೃತಿ ಸ್ಥಳಕ್ಕೆ ಹಾಗೂ ಬೆಟ್ಟದ ಮೇಲೆ ಶ್ರೀ ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.
ನಾನು ಅಮೆರಿಕಕ್ಕೆ ತೆರಳುವ ಮುನ್ನ ಹಲವಾರು ವಿಷಯಗಳನ್ನು ಪ್ರಸ್ತಾಪ ಮಾಡಿದ್ದೆ. ಕೆಪಿಎಸ್‌ಸಿ, ಬಿಡದಿ ಟೌನ್ ಶಿಪ್, ನೈಸ್ ಹಗರಣಗಳ ಬಗ್ಗೆ ಗುರುತರ ಆರೋಪಗಳನ್ನು ಮಾಡಿದ್ದೆ. ಇದು ಕೆಲವರಿಗೆ ಆತಂಕವಾಗಿದೆ ಹಾಗಾಗಿ ನಮ್ಮ ಕುಟುಂಬದ ಬಾಯಿ ಮುಚ್ಚಿಸಲು ಜೈಲಿನ ವಿಷಯಗಳನ್ನು ತೇಲಿಬಿಡಲಾಗಿದೆ ಎಂದು ಕಿಡಿಕಾರಿದರು.
ಕೆಲವು ವಿಷಯಗಳನ್ನು ಸಾರ್ವಜನಿಕವಾಗಿ ಇಡುತ್ತೇನೆ ಎಂದು ಹೇಳಿದ್ದೇನೆ. ನಮ್ಮ ವಿರೋಧಿಗಳು ಲಘುವಾಗಿ ಎಷ್ಟೇ ಮಾತನಾಡಿದರೂ ನಾನು ಉದ್ವೇಗಕ್ಕೆ ಒಳಗಾಗುವುದಿಲ್ಲ. ದಾಖಲೆಗಳ ಸಮೇತವೇ ನಾಡಿನ ಜನತೆ ಮುಂದೆ ಇಡುತ್ತೇನೆ, ದಾಖಲೆಗಳಿಲ್ಲದೆ ನಾನು ಮಾತನಾಡುವುದಿಲ್ಲ ಎಂದು ಹೆಚ್ ಡಿ ಕೆ ಹೇಳಿದರು.
ನೈಸ್ ಯೋಜನೆ ಗುತ್ತಿಗೆದಾರ ಹಾಗೂ ಮುಖ್ಯಮಂತ್ರಿ ಭೇಟಿ ಮಾಡಿದ ಫೋಟೋಗಳನ್ನು ಗಮನಿಸಿದ್ದೇನೆ. ಆ ಯೋಜನೆಯನ್ನು ಏನು ಮಾಡಲು ಹೊರಟಿದ್ದಾರೆ ಎಂಬ ಬಗ್ಗೆ ಕೂಡ ಹೇಳಿದ್ದೇನೆ. ನಮ್ಮ ತಾಯಿ ಬದುಕ್ಕಿದ್ದಾಗ ಆ ಹೆಣ್ಣುಮಗಳ ವಿರುದ್ಧ ಯಾವ ರೀತಿ ಪಿತೂರಿ ನಡೆಸಿದ್ದಾರೆ ಎಂಬ ವಿಷಯ ಈಗಿನ ಮುಖ್ಯಮಂತ್ರಿಗಳಿಗೆ ಗೊತ್ತಿದೆ. ಒಂದು ಸುದ್ದಿ ವಾಹಿನಿಯನ್ನು ಬಳಕೆ ಮಾಡಿಕೊಂಡು ನಮ್ಮ ಕುಟುಂಬದ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ. ಅದಕ್ಕೆ ಕಾನೂನು ಮೂಲಕವೇ ಉತ್ತರ ಕೊಡುತ್ತೇವೆ..ಎಲ್ಲವನ್ನೂ ಕಾಲ ನಿರ್ಧಾರ ಮಾಡುತ್ತದೆ ಎಂದು ತಿರುಗೇಟು ನೀಡಿದರು.
ಹಲವಾರು ಅಕ್ರಮ, ಸಾವಿರಾರು ಕೋಟಿ ಹಗರಣದ ಬಗ್ಗೆ ಹೇಳಲು ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇಂದು ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟಕ್ಕೆ ಬಂದು ಆ ದೇವರ ಆಶೀರ್ವಾದ ಕೇಳಿದ್ದೇನೆ. ಅಂತಿಮವಾಗಿ ತೀರ್ಪು ಅವನೇ ಕೊಡಬೇಕು ಎಂದು ಮಾರ್ಮಿಕವಾಗಿ ನುಡಿದರು.
ನಮ್ಮ ಜಾತಿಯವರು ಅಧಿಕಾರಕ್ಕೆ ಬಂದಿದ್ದಾರೆ, ಅಧಿಕಾರ ನಡೆಸಲಿ ಬಿಡಿ ಎಂದು ಕೆಲವರು ಹೇಳುತ್ತಿದ್ದಾರೆ. ನಾನು ಯಾರಿಗೂ ತೊಂದರೆ ಕೊಡಲು ಹಗರಣಗಳ ವಿಷಯ ಪ್ರಸ್ತಾಪ ಮಾಡುತ್ತಿಲ್ಲ. ರಾಜ್ಯದ ಸಂಪತ್ತಿನ ಲೂಟಿ ತಡೆಯಲು ಹೋರಾಟ ನಡೆಸುತ್ತಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಲಿ, ಅವರಿಗೆ ಬೆಂಬಲ ನೀಡುತ್ತೇನೆ. ಅಧಿಕಾರ ದುರುಪಯೋಗ ಮಾಡಿಕೊಂಡು ರಾಜ್ಯದಲ್ಲಿ ಮಾಡುತ್ತಿರುವ ಅಕ್ರಮ ಬಗ್ಗೆ ಹೇಳಲು ನಾನು ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಹೇಳಿದರು.
ನಾಡಿಗೆ ಒಳ್ಳೆಯದು ಆಗುವ ವಿಷಯಗಳ ಬಗ್ಗೆ ನಾನು ಮಾತನಾಡುತ್ತಿದ್ದರೆ, ಜನರ ಗಮನವನ್ನು ಬೇರೆಡೆಗೆ ಹೊರಳಿಸುವ ಕುತಂತ್ರದಿಂದ ಈ ಸರಕಾರ ಬೇರೆ ದಾರಿ ಹಿಡಿದಿದೆ ಎಂದು ಚಾಟಿ ಬೀಸಿದರು.
ನಾನು ರಾಜ್ಯಕ್ಕ ಕಪ್ಪುಮಸಿ ಬಳಿಯುವ ಕೆಲಸ ಮಾಡುತ್ತಿಲ್ಲ. ವ್ಯವಸ್ಥೆಯನ್ನೇ ಬುಡಮೇಲು ಮಾಡುವವರ ವಿರುದ್ದ ಹೋರಾಟ ಮಾಡುತ್ತೇನೆ.
ಹಾಸನ ಪ್ರಕರಣ ನಡೆದು, ಆ ಹುಡುಗ ಜೈಲಿಗೆ ಹೋಗಿದ್ದೂ ಆಗಿದೆ. ಎರಡು ವರ್ಷ ಇಲ್ಲದೆ ಬಿಡದಿ, ಕೆಪಿಎಸ್‌ಸಿ, ನೈಸ್ ವಿಷಯ ಬಂದಾಗ ಪರಪ್ಪನ ಅಗ್ರಹಾರದದಲ್ಲಿ ಮೊಬೈಲ್ ಬಂದುಬಿಡುತ್ತೆ. ಪೆನ್‌ಡ್ರೈವ್ ಇದೆ, ಅದರಲ್ಲಿ ಅಶ್ಲೀಲ ಚಿತ್ರ ಇದೆ ಎಂದು ಸುದ್ದಿಗಳನ್ನು ಬಿಡುತ್ತಿದ್ದಾರೆ. ಎರಡು ವರ್ಷದಿಂದ ಆ ಹುಡುಗ ಜೈಲಿನಲ್ಲಿ ಇದ್ದಾನೆ. ನ್ಯಾಯಾಲಯ ತೀರ್ಪು ಕೊಟ್ಟಿದೆ, ತೀರ್ಪು ಸ್ವೀಕರಿಸಿದ್ದೇವೆ. ಎರಡು ವರ್ಷದಿಂದ ಇಲ್ಲದೆ ಇದ್ದಿದ್ದು ಈಗ ಫೋನ್ ಇಟ್ಟುಕೊಂಡಿದ್ದಾನೆ ಎಂದು ಹೊಸದಾಗಿ ಕಥೆ ಶುರು ಮಾಡಿದ್ದಾರೆ. ಪ್ರತೀ ದಿನ ಸರಣಿ ಕಥೆಗಳನ್ನು ಬಿಡುತ್ತಿದ್ದಾರೆ. ಹಿಂದೆ ಏಕೆ ಮಾಡಲಿಲ್ಲ, ಎರಡು ವರ್ಷದಿಂದ ಫೋನ್ ಸಿಗಲಿಲ್ಲವಾ ಅವನ ಹತ್ತಿರ ಈಗ ಬಂತಾ ಜೈಲಲ್ಲಿ ಇರುವವನಿಗೆ ಅಶ್ಲೀಲ ಚಿತ್ರ ಕೊಟ್ಟಿದ್ದು ಯಾರು, ಆ ಅಶ್ಲೀಲ ಚಿತ್ರ ಎಲ್ಲಿಂದ ಜೈಲಿನ ಒಳಕ್ಕೆ ಬಂತು ಯಾಕೆ ಬಂತು, ಹೇಗೆ ಬಂತು, ಮೊಬೈಲ್ ಕೊಟ್ಟವರು ಯಾರು ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.
ಪಿಕ್ ಪ್ಯಾಕೇಟ್ ಮಾಡಿದವನು ಕೂಡ ಜೈಲಲ್ಲಿ ಫೋನ್ ಇಟ್ಟುಕೊಂಡಿದ್ದಾನೆ ಎಂಬುದು ಇವರಿಗೆ ಗೊತ್ತಿಲ್ಲವೇ, ಅವೆಲ್ಲವನ್ನೂ ತಂದು ಕೊಡುವವರು ಯಾರು,ನಮ್ಮ ಹೋರಾಟವನ್ನು ಹತ್ತಿಕುವ ಏಕೈಕ ದುರುದ್ದೇಶದಿಂದ ಆ ಹುಡುಗನ ಹೆಸರನ್ನು ಮುಂದಕ್ಕೆ ಬಿಟ್ಟು ನಮ್ಮ ಕುಟುಂಬದ ಮೇಲೆ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ನಾಗಮಂಗಲದ ವ್ಯಕ್ತಿ ಹೇಳಿದ್ದನ್ನು, ಆತನ ಜತೆ ಇವತ್ತಿನ ಮುಖ್ಯಮಂತ್ರಿ ನಡೆಸಿದ ಷಡ್ಯಂತ್ರ್ಯವನ್ನು ನಾನು ಮರೆಯಲು ಸಾಧ್ಯವಿಲ್ಲ. ಈ ಸರಕಾರದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಇಬ್ಬರು ಸೇರಿ ದೇವೇಗೌಡರ ಕುಟುಂಬವನ್ನು ಸರ್ವನಾಶ ಮಾಡುವುದೇ ಮೊದಲ ಆದ್ಯತೆ ಎಂದು ಹೇಳಿದ್ದಾನೆ. ನಿನ್ನ ಹತ್ತಿರ ಏನೇನು ಇದೆ ತಂದುಕೊಡಿ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ ಎಂದು ಹೇಳಿದ್ದರು. ಏನೇನು ತರಿಸಿದಿರಿ, ಎಲ್ಲಿಂದ ತರಿಸಿದಿರಿ? ಯಾರಿಗೆ ನ್ಯಾಯ ಕೊಟ್ಟಿದ್ದೀರಾ? ದೆಹಲಿಯಿಂದ ನಿಮ್ಮ ನಾಯಕ ಬಂದು 400 ಅತ್ಯಾಚಾರ ಪ್ರಕರಣಗಳು ನಡೆದಿವೆ ಎಂದು ಹೇಳಿದ್ದ. ನಮ್ಮ ಕುಟುಂಬದಿಂದ ಅನ್ಯಾಯ ಆಗುತ್ತಲ್ಲವಾ? ನೀವು ಎಷ್ಟು ಹೆಣ್ಣುಮಕ್ಕಳ ಕುಟುಂಬಗಳನ್ನು ಸರಿಮಾಡಿ ಕೊಟ್ಟಿದಿರಪ್ಪಾ?ಎಷ್ಟು ಹೆಣ್ಣುಮಕ್ಕಳ ಮಾನ ಕಾಪಾಡಿದ್ದೀರಪ್ಪಾಎಂದು ಹೆಚ್ ಡಿ ಕೆ ಡಿ.ಕೆ.ಶಿವಕುಮಾರವ ವಿರುದ್ಧ ವಾಗ್ದಾಳಿ ನಡೆಸಿದರು.
ಬುದ್ದಿವಂತರಾಗಬೇಕು ಅಂದಿದ್ದಾರೆ ಅವರು. ಸತ್ತವರ ಹೆಬ್ಬೆಟ್ಟು ಹಾಕಿಸಿಕೊಳ್ಳಲು ಬುದ್ದಿವಂತರಾಗಬೇಕಾ? ಅವರು ಹೇಳಿದ್ದು ಸತ್ಯ, ವಿದ್ಯಾವಂತರು ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಆಗುತ್ತಾ,ಬುದ್ದಿವಂತರೇ ಒತ್ತಿಸಿಕೊಳ್ಳೋದು ನೋಡಿ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.

