ಮೈಸೂರು: ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಬಗ್ಗೆ ನಗರದ ವಿಧಾನ ಪರಿಷತ್ ಸದಸ್ಯ ಮಾಡಿರುವ ಆರೋಪಗಳಿಗೆ ಪ್ರಾಧಿಕಾರದ ಅಧ್ಯಕ್ಷ ಆಯೂಬ್ ಖಾನ್ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಪ್ರಾಧಿಕಾರದಲ್ಲಿ ಮೂರರಿಂದ ಮೂರೂವರೆ ತಿಂಗಳು ಎಕ್ಸಿಬಿಷನ್ ನಡೆಯುತ್ತದೆ. ನಾನು ಅಧಿಕಾರ ವಹಿಸಿಕೊಳ್ಳುವ ಮೊದಲು 8 ರಿಂದ 8.5 ಲಕ್ಷ ಜನರು ವೀಕ್ಷಣೆ ಮಾಡುತ್ತಿದ್ದರು ಮತ್ತು ಟೆಂಡರ್ ಮೊತ್ತ 9 ಕೋಟಿ ರೂ. ಇತ್ತು. ನಾನು ಅಧಿಕಾರ ವಹಿಸಿಕೊಂಡ ಎರಡು ವರ್ಷಗಳಲ್ಲಿ ಪ್ರಾಧಿಕಾರದ ಚಿತ್ರಣವೇ ಸಂಪೂರ್ಣ ಬದಲಾಗಿದೆ ಎಂದು ಹೇಳಿದರು.
ಕಳೆದ ವರ್ಷ 16 ಲಕ್ಷ ಜನರು ಪ್ರದರ್ಶನ ವೀಕ್ಷಿಸಿದ್ದಾರೆ ಮತ್ತು 12.5 ಕೋಟಿ ರೂ. ಟೆಂಡರ್ ಮೊತ್ತ ಬಂದಿದೆ. ಸರ್ಕಾರ ಪ್ರಾಧಿಕಾರಕ್ಕೆ ಮೂರು ಯೋಜನೆಗಳನ್ನು – ಕುಸ್ತಿ ಅಖಾಡ, ಬೇಲೂರು-ಹಳೇಬೀಡು ಮಾದರಿ ಮತ್ತು ಸಂಗೀತ ಕಾರಂಜಿ ನಿರ್ಮಾಣಕ್ಕೆ ಸೂಚಿಸಿತ್ತು. 20 ಕೋಟಿ ರೂ. ಯೋಜನೆಗೆ ಸದ್ಯ 10 ಕೋಟಿ ರೂ. ಬಿಡುಗಡೆಯಾಗಿದೆ. ಅವರು ಆರೋಪಿಸಿದಂತೆ 30-40 ಕೋಟಿ ರೂ. ಅನುದಾನ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಗೀತ ಕಾರಂಜಿ ಬಗ್ಗೆ ಸರಿಯಾಗಿ ತಿಳಿದುಕೊಂಡು, ಅದನ್ನು ಆನ್ ಮಾಡಿಸಿ ನೋಡಿ ಮಾತನಾಡಬೇಕಿತ್ತು. ಕೇವಲ ಎರಡು ನಿಮಿಷ ನೋಡಿ ಟೀಕೆ ಮಾಡುವುದು ಸರಿಯಲ್ಲ. ನಮ್ಮ ಸಂಗೀತ ಕಾರಂಜಿ ಕೆಆರ್‌ಎಸ್‌ಗಿಂತ ಒಂಬತ್ತು ಪಟ್ಟು ದೊಡ್ಡದಿದೆ. ಟೆಂಡರ್ ಬಾಂಬೆ ಅವರಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ, ಅವರು ಭಾರತೀಯರಲ್ಲವೇ ಎಂದು ಅಯೂಬ್ ಖಾನ್ ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ನೈತಿಕತೆ ಇವರಿಗೆ ಏನಿದೆ, ಇವರ ಪಕ್ಷದ ನಾಯಕರನ್ನೇ ಕೇಳಲಿ ಸಿದ್ದರಾಮಯ್ಯ ಯಾರು ಎಂದು ಇದೇ ವೇಳೆ ಟಾಂಗ್ ನೀಡಿದರು.
ಅವರ ಪಕ್ಷದ ನಾಯಕರೇ ಸಿದ್ದರಾಮಯ್ಯ ಅವರನ್ನು ಹೊಗಳುತ್ತಿದ್ದಾರೆ. ಇನ್ನು ಮುಂದೆ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಆಯೂಬ್ ಖಾನ್ ಎಚ್ಚರಿಕೆ ನೀಡಿದರು.

