ಮೈಸೂರು: ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ, ಟೋಲ್ ನಾಮಫಲಕದಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುವಂತೆ ಹೋರಾಟ ನಡೆಸಿದ್ದ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಗೆ ಜಯ ಸಿಕ್ಕಿದೆ
ಹೆದ್ದಾರಿಯಲ್ಲಿ ಅಳವಡಿಸಿದ್ದ ನಾಮಫಲಕದಲ್ಲಿ ಹಿಂದಿ ಮತ್ತು ಇಂಗ್ಲಿಷ್‌ಗೆ ಆದ್ಯತೆ ನೀಡಿ ಕನ್ನಡವನ್ನು ಕೊನೆಗೆ ಹಾಕಲಾಗಿತ್ತು. ಇದನ್ನು ಖಂಡಿಸಿ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಯಿಂದ ಎಚ್ಚೆತ್ತ ಟೋಲ್ ಆಡಳಿತ ಮಂಡಳಿ ಕೂಡಲೇ ನಾಮಫಲಕ ಬದಲಿಸಿ ಕನ್ನಡಕ್ಕೆ ಮೊದಲ ಸ್ಥಾನ ನೀಡಿದೆ. ಇದು ಕನ್ನಡಪರ ಹೋರಾಟಕ್ಕೆ ಸಂದ ಜಯ ಎಂದು ಸಂಘಟನೆ ಹರ್ಷ ವ್ಯಕ್ತಪಡಿಸಿದೆ.
ನಾಡಿನ ಹೆದ್ದಾರಿಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬ ಸರ್ಕಾರದ ಆದೇಶವಿದ್ದರೂ ಟೋಲ್ ಸಿಬ್ಬಂದಿ ಕನ್ನಡವನ್ನು ನಿರ್ಲಕ್ಷಿಸಿದ್ದರು ಎಂದು ಕಾರ್ಯಕರ್ತರು ಆರೋಪಿಸಿದ್ದರು.
ಹೊಸ ನಾಮಫಲಕ ಅಳವಡಿಸುತ್ತಿದ್ದಂತೆ ಸ್ಥಳದಲ್ಲೇ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಚಾ.ಗು. ನಾಗರಾಜ್ ಮತ್ತು ಜಿಲ್ಲಾಧ್ಯಕ್ಷ ಸಂತೋಷ್ ಕುಮಾರ್, ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು. ಇದು ನಮ್ಮ ಹಕ್ಕು. ಕನ್ನಡವನ್ನು ಕಡೆಗಣಿಸುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಸಂಭ್ರಮಾಚರಣೆಯಲ್ಲಿ ಚಾಮರಾಜನಗರ ಜಿಲ್ಲಾಧ್ಯಕ್ಷ ದೇವರಾಜ್, ಗ್ರಾಮಾಂತರ ಗೌರವಾಧ್ಯಕ್ಷ ಸಿಂಧುವಳ್ಳಿ ಶಿವಕುಮಾರ್, ವೆಂಕಟೇಶ್ ಕೆರೆಹಳ್ಳಿ, ಗ್ರಾಮಾಂತರ ಅಧ್ಯಕ್ಷ ರವಿ ಕೆ, ಮಧುಕುಮಾರ್, ಗಿರೀಶ್, ಮಣಿ, ಯುವ ಘಟಕದ ಅಧ್ಯಕ್ಷ ಕೀರ್ತಿ ಕುಮಾರ್, ಉಮೇಶ್, ಮಹಿಳಾ ಘಟಕದ ಅನಿತಾ ಆರ್, ವೀಣಾ, ದೀಪಾ, ಲಕ್ಷ್ಮಿ, ರಾಣಿ, ಹೇಮಾ, ಸುನಿಲ್, ಕಿಟ್ಟಿ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

