ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮದ ನಡುವೆಯೇ ನಗರದಲ್ಲಿ ದೊಡ್ಡ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿಸಿದೆ.
ನಗರದ ಹೃದಯ ಭಾಗ ಗನ್ ಹೌಸ್ ವೃತ್ತದ ಬಳಿ ಅಳವಡಿಸಿದ್ದ ಬೃಹತ್ ವಿದ್ಯುತ್ ದೀಪಾಲಂಕಾರದ ಕಟೌಟ್ ಏಕಾಏಕಿ ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.
ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಬಂದಿದ್ದ ಟಿಟಿ ವಾಹನದ ಮೇಲೆ ಈ ಬೃಹತ್ ಕಟೌಟ್ ಬಿದ್ದಿದೆ. ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಪ್ರಮುಖ ರಸ್ತೆಯಲ್ಲೆ ಈ ಘಟನೆ ನಡೆದಿದ್ದು,ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕೆಲವೇ ಗಂಟೆಗಳ ಹಿಂದೆ ಅಳವಡಿಸಿದ್ದ ಕಟೌಟ್ ನೆಲಕ್ಕೆ ಉರುಳಿದೆ. ಕಟೌಟ್ ಬೀಳುತ್ತಿದ್ದಂತೆ ಅಲ್ಲಿದ್ದ ಸಾರ್ವಜನಿಕರು ಭಯಭೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡಿದರು
ಈ ಅವಘಡಕ್ಕೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಮತ್ತು ಗುತ್ತಿಗೆ ಪಡೆದಿದ್ದ ಮೋಹನ್ ಎಂಬ ವ್ಯಕ್ತಿಯ ಬೇಜವಾಬ್ದಾರಿತನವೇ ಕಾರಣ ಎಂಬ ಆರೋಪ ಕೇಳಿಬಂದಿದೆ.
ಬೃಹತ್ ಲೈಟ್ ಕಟೌಟ್ ಅಳವಡಿಕೆಗೆ ಕೇವಲ ಅರ್ಧ ಅಡಿ ಹಳ್ಳ ತೆಗೆದು ಕಂಬ ನೆಟ್ಟಿರುವುದು ಅತ್ಯಂತ ನಿರ್ಲಕ್ಷ್ಯದ ಪರಮಾವಧಿ, ವೈಜ್ಞಾನಿಕವಾಗಿ ಕಂಬವನ್ನು ಆಳವಾಗಿ ಹೂಳದೆ, ತಾತ್ಕಾಲಿಕವಾಗಿ ನಿಲ್ಲಿಸಿದ್ದರಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಟಿಟಿ ವಾಹನದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ವಲ್ಪ ಯಾಮಾರಿದ್ದರೂ ದೊಡ್ಡ ದುರಂತವೇ ಸಂಭವಿಸುತ್ತಿತ್ತು. ಅಲ್ಲದೆ ಕಟೌಟ್ ಬಳಿ ನಿಂತಿದ್ದ ಸಾರ್ವಜನಿಕರು ಕೂಡ ಪಾರಾದಂತಾಗಿದೆ.
ದಸರಾ ಸಂದರ್ಭದಲ್ಲಿ ಲಕ್ಷಾಂತರ ಪ್ರವಾಸಿಗರು ಸೇರುವ ಸ್ಥಳದಲ್ಲೇ ಇಂತಹ ಕಳಪೆ ಕಾಮಗಾರಿ ನಡೆದಿರುವುದು ಸೆಸ್ಕ್ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಮೈಸೂರಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣ ಸಂಬಂಧಪಟ್ಟ ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಎಲ್ಲಾ ದೀಪಾಲಂಕಾರದ ಕಟೌಟ್‌ಗಳ ಸುರಕ್ಷತೆಯನ್ನು ಮರುಪರಿಶೀಲಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

