ಹೆಣ್ಣುಮಕ್ಕಳು ಸ್ವಾವಲಂಬಿಗಳಾದಾಗ ಸಮಾಜದ ಪ್ರಗತಿ: ಡಾ. ನಾಗಲಕ್ಷ್ಮಿ ಚೌಧರಿ

ಮೈಸೂರು: ಹೆಣ್ಣುಮಕ್ಕಳು ಶಿಕ್ಷಣ ಪಡೆದು ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕೊಂಡಾಗ ಮಾತ್ರ ಸಮಾಜದ ನಿಜವಾದ ಅಭಿವೃದ್ಧಿ ಸಾಧ್ಯ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದರು.

ಮೈಸೂರಿನ ಕುವೆಂಪು ಬಯಲು ರಂಗಮಂದಿರದಲ್ಲಿ ನಡೆದ 8ನೇ ದಿನದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಧೈರ್ಯದಿಂದ ಸಾಗಬೇಕು. ಹೆಣ್ಣುಮಕ್ಕಳು ಕೊಡುವ ಕೈಯಾಗಿ ಬೆಳೆಯಬೇಕು, ಬೇಡುವ ಕೈಯಾಗಬಾರದು. ಡಾ. ಬಿ.ಆರ್. ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟದ ಮಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪರ್ವತರಾಜನ ಮಗಳಾದ ಶೈಲಪುತ್ರಿ ದೇವಿಯಂತೆ ಪರ್ವತದಷ್ಟೇ ಅಚಲವಾದ ದೃಢ ಸಂಕಲ್ಪ ವಿದ್ಯಾರ್ಥಿಗಳಲ್ಲಿ ಇರಬೇಕು. ಯಾವುದೇ ಆಕರ್ಷಣೆಗೆ ಒಳಗಾಗಿ ಓದಿನಿಂದ ಗಮನ ಬೇರೆಡೆ ಹರಿಸಬಾರದು ಎಂದು ಕರೆ ನೀಡಿದರು.

ಇತ್ತೀಚೆಗೆ ಪೊಲೀಸ್ ಠಾಣೆಗಳಲ್ಲಿ ಹೆಚ್ಚುತ್ತಿರುವ ಓಡಿಹೋಗುವ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಕ್ಷಣಿಕ ಆಕರ್ಷಣೆ ಮತ್ತು ಹಾರ್ಮೋನ್ ಪ್ರಭಾವಕ್ಕೆ ಒಳಗಾಗಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಮಾದಕ ವ್ಯಸನಗಳಾದ ಮದ್ಯಪಾನ, ಧೂಮಪಾನ, ಗಾಂಜಾ, ಡ್ರಗ್ಸ್ ನಿಂದ ದೂರವಿರಬೇಕು ಎಂದು ನಾಹಲಕ್ಷ್ಮಿ ಸಲಹೆ ನೀಡಿದರು.

ಮಹಿಳಾ ಸುರಕ್ಷತೆಗಾಗಿ 112 ತುರ್ತು ಸಹಾಯವಾಣಿ, 181 ಮಹಿಳಾ ಸಹಾಯವಾಣಿ ಮತ್ತು One Stop Centre ನಲ್ಲಿ ಪೊಲೀಸ್, ಉಚಿತ ವಕೀಲರ ನೆರವು, ವೈದ್ಯಕೀಯ ಮತ್ತು ಸಮಾಲೋಚನೆ ಸೌಲಭ್ಯವಿದೆ. ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಫೋಟೋ, ವಿಡಿಯೋ ಹಂಚಿ ಬ್ಲ್ಯಾಕ್ ಮೇಲ್ ಮಾಡಿದರೆ http://stopncii.org ನಲ್ಲಿ ದೂರು ನೀಡಿ ಅಳಿಸಬಹುದು ಎಂದು ನಾಗಲಕ್ಷ್ಮಿ ಚೌಧರಿ ಮಾಹಿತಿ ನೀಡಿದರು.

ಒಟ್ಟು 30 ಕಾಲೇಜುಗಳ ತಂಡಗಳು ಪೌರಾಣಿಕ, ಜಾನಪದ, ಸಾಮಾಜಿಕ ಜಾಗೃತಿ ಸಾರುವ ನೃತ್ಯ ಪ್ರದರ್ಶನ ನೀಡಿದವು. ಮಹಾರಾಣಿ ಮಹಿಳಾ ಕಾಲೇಜು, ಮಂಡ್ಯ, ಹುಣಸೂರು, ಕೆ.ಆರ್.ನಗರ, ಚಾಮರಾಜನಗರ, ಅರಸೀಕೆರೆ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಲಿಂಗ ಸಮಾನತೆ, ಪರಿಸರ ಸಂರಕ್ಷಣೆ, ಮಾನಸಿಕ ಒತ್ತಡ ನಿರ್ವಹಣೆ ಕುರಿತು ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯಾ, ಯುವ ಸಂಭ್ರಮ ಉಪಸಮಿತಿ ಅಧ್ಯಕ್ಷ ಡಾ. ರಾಕೇಶ್, ಪ್ರೊ. ಸ್ವಪ್ನಾ, ಪ್ರೊ. ಜ್ಯೋತಿ, ಪ್ರತಿಭಾ ಮತ್ತಿತರರು ಉಪಸ್ಥಿತರಿದ್ದರು.