ಯಮೈಸೂರು: ಮಹಾನಗರ ಪಾಲಿಕೆ (MCC) ಕಾರ್ಮಿಕನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಗಾಂಧಿ ನಗರ ನಿವಾಸಿ ರಘು ಎಂಬುವವರು ಹಲ್ಲೆಗೊಳಗಾದ ಕಾರ್ಮಿಕರು. ಇವರು ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.
ಘಟನೆ ವಿವರ: ಭಾನುವಾರ ರಾತ್ರಿ ರಘು ಅವರು ಎಫ್‌ಟಿಎಸ್ (FTS) ವೃತ್ತದಲ್ಲಿ ಅಳವಡಿಸಿದ್ದ ಫ್ಲೆಕ್ಸ್‌ಗಳನ್ನು ತೆರವುಗೊಳಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಇಬ್ಬರು ವ್ಯಕ್ತಿಗಳು ಫ್ಲೆಕ್ಸ್ ತೆರವುಗೊಳಿಸದಂತೆ ತಡೆದಿದ್ದಾರೆ.
ಆಗ ರಘು ಅವರು, ಆಯುಕ್ತರ ಆದೇಶದ ಮೇರೆಗೆ ಫ್ಲೆಕ್ಸ್ ತೆರವು ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಆಕಾಶ್ ಮತ್ತು ನಾಗ ಎಂಬ ಇಬ್ಬರು ವ್ಯಕ್ತಿಗಳು ರಘು ಅವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ರಘು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಸಂಬಂಧ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

