ಬೆಂಗಳೂರು: ತಮ್ಮ ಸಂಪುಟದ ಐವರು ಸಚಿವರನ್ನು ನಿಮ್ಮ ವಿರುದ್ಧ ಸ್ಟಿಂಗ್ ಆಗಿದೆ ಎಂದು ಬ್ಲಾಕ್ ಮೇಲ್ ಮಾಡುವ ಮುನ್ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜ್ ಪಕ್ಕದ ಪಂಚತಾರಾ ಹೋಟೆಲ್ ನಲ್ಲಿ ಸ್ಟಿಂಗ್ ಮಾಡುವ ವ್ಯಕ್ತಿಯೊಂದಿಗೆ ಗಂಟೆಗಟ್ಟಲೆ ಚರ್ಚೆ ನಡೆಸಿದ್ದರು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ವಾರದಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಕೇಂದ್ರ ಸಚಿವರು ಸುದ್ದಿಗಾರರ ಜತೆ ಮಾತನಾಡಿದರು.
ಆ ಹೋಟೆಲ್ ನಲ್ಲಿ ಮುಖ್ಯಮಂತ್ರಿ ಯಾರೊಂದಿಗೆ ಕೂತಿದ್ದರು? ಆ ವ್ಯಕ್ತಿ ಯಾರು? ಆ ವ್ಯಕ್ತಿಯ ಜತೆ ಈ ಮುಖ್ಯಮಂತ್ರಿಗೆ ಏನು ಸಂಬಂಧ? ಆ ವ್ಯಕ್ತಿಯನ್ನು ಇಟ್ಟುಕೊಂಡು ಮುಖ್ಯಮಂತ್ರಿ ಯಾರ ಯಾರ ವಿರುದ್ಧ ಸ್ಟಿಂಗ್ ಮಾಡಿಸಿದ್ಧರು ಎಂಬುದನ್ನು ಡಿಕೆಶಿ ಅವರು ರಾಜ್ಯದ ಜನರಿಗೆ ಹೇಳಬೇಕಾಗುತ್ತದೆ ಎಂದು ಅಗ್ರಹಿಸಿದರು.
ನನ್ನ ವಿರುದ್ಧವೇ ಸ್ಟಿಂಗ್ ನಡೆದಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅಲ್ಲಿಗೆ ರಾಜ್ಯದಲ್ಲಿ ಕಿಂಗ್ ಅಪರೇಷನ್ ನಡೆಯುತ್ತಿದೆ ಎಂದು ಸ್ವತಃ ಅವರೇ ಒಪ್ಪಿಕೊಂಡಂತೆ ಆಯಿತು. ಸ್ಟಿಂಗ್ ವಿಷಯ ನಿಜ ಎಂದು ಅವರೇ ಒಪ್ಪಿಕೊಂಡಂತೆ ಆಯಿತು. ಹಾಗಾದರೆ ಮೌಂಟ್ ಕಾರ್ಮೆಲ್ ಕಾಲೇಜಿನ ಪಕ್ಕದ ಹೋಟೆಲ್ ನಲ್ಲಿ ಸ್ಟಿಂಗ್ ಆಪರೇಷನ್ ಮಾಡುವ ವ್ಯಕ್ತಿ ಜತೆ ಕೂತು ಎಷ್ಟು ಹೊತ್ತು ಚರ್ಚೆ ನಡೆಸಿದಿರಿ? ಆ ವ್ಯಕ್ತಿ ಯಾರು ಅಂತ ಜನರ ಮುಂದೆ ಮುಖ್ಯಮಂತ್ರಿ ಹೇಳಬೇಕಲ್ಲವೇ? ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ರಾಜ್ಯದಲ್ಲಿ ಏನು ನಡೆಯುತ್ತಿದೆ ಎನ್ನುವುದು ರಾಜ್ಯದ ಜನತೆಯ ಮುಂದೆ ಮುಖ್ಯಮಂತ್ರಿ ಇಡಬೇಕು. ಅಲ್ಲದೆ, ರಾಜ್ಯದ ಹಿರಿಯ ನಾಯಕರು, ಕಾಂಗ್ರೆಸ್ ನಾಯಕರೊಬ್ಬರ ವಿರುದ್ಧ ನಡೆದಿರುವ ಸ್ಟಿಂಗ್ ಆಪರೇಷನ್ ಆಗಿದೆ ಎನ್ನುವ ವಿಚಾರ ಹಾಗೆಯೇ ಸೈಲೆಂಟ್ ಆಯಿತು? ಆ ಸ್ಟಿಂಗ್ ನಲ್ಲಿ ಮುಖ್ಯಮಂತ್ರಿ ಕೂರಿಸಿಕೊಂಡು ಮಾತನಾಡಿರುವ ವ್ಯಕ್ತಿಯ ಪಾತ್ರವೇನು? ಎಂಬುದು ಹೊರಗೆ ಬರಬೇಕಲ್ಲವೇ? ಮೇಲೆ ಮಾಧ್ಯಮದ ಮುಸುಕು ಹಾಕಿಕೊಂಡು ಒಳಗಡೆ ಇಂತಹ ಕೆಟ್ಟ ದಂಧೆ ಮಾಡುತ್ತಿರುವ ಅಯೋಗ್ಯನಿಗೆ ಮುಖ್ಯಮಂತ್ರಿ ರಕ್ಷಣೆ ಕೊಟ್ಟು ತನಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿದ್ದಾರೆ. ಹಾಗೆಯೇ ಅವನನ್ನು ತಮ್ಮ ರಾಜಕೀಯ ವಿರೋಧಿಗಳ ಮೇಲೆ ಪ್ರಯೋಗ ಮಾಡುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಸಿಎಂ ವಿರುದ್ಧ ನೇರ ಆರೋಪ ಮಾಡಿದರು.
ಈ ರೀತಿ ತಮಗೆ ಆಗದವರು ವಿರುದ್ಧ ಸ್ಟಿಂಗ್ ಮಾಡಿಸುವ ವ್ಯಕ್ತಿಯನ್ನು ಸ್ಟಿಂಗ್ ಕಿಂಗ್ ಪಿನ್ ಎನ್ನಬೇಕೋ ಅಥವಾ ಸ್ಟಿಂಗ್ ಸಾಮ್ರಾಟ ಎನ್ನಬೇಕೋ ಎಂಬುದನ್ನು ಈ ಮುಖ್ಯಮಂತ್ರಿಯೇ ಹೇಳಬೇಕು. ಅವರನ್ನು ಏನೆಂದು ಕರೆಯಬೇಕು ಎಂಬುದು ನನಗೆ ಗೊತ್ತಾಗುತ್ತಿಲ್ಲ. ತಮಗೆ ಇಂತಹ ಯಾವ ಬಿರುದು ಸರಿ ಹೊಂದುತ್ತದೆ ಎಂಬುದನ್ನು ಅವರೇ ನಿಶ್ಚಯ ಮಾಡಬೇಕು ಎಂದು ಕೇಂದ್ರ ಸಚಿವರು ಲೇವಡಿ ಮಾಡಿದರು.
ಯಾವ ಐದು ಮಂದಿ ಮೇಲೆ ಸ್ಟಿಂಗ್ ಆಗಿದೆ?
ಐದು ಜನ ಮಂತ್ರಿಗಳ ಮೇಲೆ ಸ್ಟಿಂಗ್ ಆಪರೇಷನ್ ನಡೆದಿದೆ ಎಂದು ಮುಖ್ಯಮಂತ್ರಿ ಸಂಪುಟ ಸಭೆಯಲ್ಲಿ ಹೇಳಿದ್ದಾರೆ ಎಂದು ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಿವೆ. ತಮ್ಮ ಸಂಪುಟದ ಸದಸ್ಯರ ಮೇಲೆ ನಡೆದಿರುವ ಈ ಕುಟುಕು ಕಾರ್ಯಾಚರಣೆಯ ಬಗ್ಗೆ ಮುಖ್ಯಮಂತ್ರಿ ಉತ್ತರ ಕೊಡಬೇಕಾಗುತ್ತದೆ. ಇದನ್ನು ಸೂಕ್ತ ರೀತಿಯಲ್ಲಿ ತನಿಖೆ ಮಾಡಿಸಬೇಕಾಗುತ್ತದೆ. ನಿಮ್ಮದೇ ಸರ್ಕಾರ ಇದೆ. ನಿಮ್ಮದೇ ಪೊಲೀಸ್ ವ್ಯವಸ್ಥೆ ಇದೆ. ₹35 ಲಕ್ಷ ಬಹುಮಾನ ಪಡೆದ ನಿಮ್ಮದೇ ಅತ್ಯಂತ ದಕ್ಷ ಎಸ್ಐಟಿ ತಂಡ ಇದೆ. ಹೀಗಿದ್ದರೂ ಕೂಡ ನೀವು ತನಿಖೆಗೆ ಏಕೆ ಹಿಂಜರಿಯುತ್ತಿದ್ದೀರಿ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ನೀವೇನು ಸಾಮಾನ್ಯ ವ್ಯಕ್ತಿಯಲ್ಲ. ಎಂತೆಂಥವರ ಮೇಲೆ ಏನೇನು ಮಾಡಿದ್ದೀರಿ ಎಂಬುದು ಗೊತ್ತಿಲ್ಲದ ವಿಚಾರವೇನೋ ಅಲ್ಲ. ಒಂದು ವೇಳೆ ಆ ಐದು ಜನ ಮಂತ್ರಿಗಳ ಮೇಲೆ ಕುಟುಕು ಕಾರ್ಯಾಚರಣೆ ನಡೆದಿದ್ದರೆ ಅವರನ್ನು ಇನ್ನೂ ಸಂಪುಟದಲ್ಲಿ ಯಾಕೆ ಇಟ್ಟುಕೊಂಡಿದ್ದೀರಿ? ಎಂದು ಅವರು ಕೇಳಿದರು.
ನಾನು ಹಿಂದೆಯೇ ಹೇಳಿದ್ದೇ. ವಿಜಯದಶಮಿ ಹಬ್ಬಕ್ಕೆ ಮೊದಲು ಏನೇನೋ ಆಗಬಹುದು ಎಂದು ತಿಳಿಸಿದ್ದೆ. ನಾನು ನೈಸ್ ಹೋರಾಟದಲ್ಲಿ ನಿರತನಾಗಿ ದಾಖಲೆಗಳನ್ನು ಬಿಡುಗಡೆ ಮಾಡಿ ರಾಜ್ಯದ ಜನರ ಮುಂದೆ ನ್ಯಾಯ ಕೇಳುತ್ತಿದ್ದಾರೆ ಈ ಸ್ಟಿಂಗ್ ವ್ಯವಹಾರದ ಹಿಂದಿರುವ ವ್ಯಕ್ತಿಗಳು ಅದರ ದಿಕ್ಕು ತಪ್ಪಿಸಲು ಸ್ಟಿಂಗ್ ಆಪರೇಶನ್ ವಿಷಯ ಹೊರಕ್ಕೆ ತಂದರು. ಅದಕ್ಕೆ ಈ ಮುಖ್ಯಮಂತ್ರಿಯನ್ನು ಅಭಿನಂದಿಸುತ್ತೇನೆ. ಸದ್ಯಕ್ಕೆ ಜನರ ಗಮನ ಮೈಸೂರು ದಸರಾ, ನಾಡಹಬ್ಬದ ಕಡೆಗೆ ಇದೆ. ಆದರೂ ನಾನು ಕೆಲ ವಿಚಾರಗಳನ್ನು ಮಾತನಾಡಬೇಕಿದೆ ಎಂದು ಸಚಿವರು ಹೇಳಿದರು.
ರಾಜ್ಯದ ಗೃಹ ಸಚಿವರು ಸ್ಟಿಂಗ್ ಆಪರೇಷನ್ ಬಗ್ಗೆ ದೂರು ಕೊಡಲಿ ಎಂದು ಬೇರೆ ಹೇಳಿದ್ದಾರೆ. ಎಷ್ಟು ಕೇಸ್ ಗಳಲ್ಲಿ ದೂರನ್ನೇ ಕೊಡದೇ ತನಿಖೆಗೆ ಅವಕಾಶ ಆದೇಶ ನೀಡಿಲ್ಲವೇ? ಜನತೆಗೆ ಅನುಮಾನ ಬರುವ ರೀತಿಯಲ್ಲಿ ಮುಖ್ಯಮಂತ್ರಿಗಳೇ ವೇದಿಕೆ ಸಿದ್ದ ಮಾಡಿ ಕೊಟ್ಡಿದ್ದಾರೆ. ಸಂಪುಟದಲ್ಲಿ ಪ್ರಮುಖ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎಂದು ಸುದ್ದಿವಾಹಿನಿಯಲ್ಲಿ ಸುದ್ದಿ ಹೊರಕ್ಕೆ ಬಂತು. ಸ್ಟಿಂಗ್ ಬಗ್ಗೆ ಸಚಿವರಿಗೆ ಹೆದರಿಸಿದ್ದು ಮಾತ್ರವಲ್ಲದೆ ಸಂಪುಟ ಸಭೆಗೆ ಹೋಗುವಾಗ ಮುಖ್ಯಮಂತ್ರಿ ಆಪ್ತ ಸಹಾಯಕರು ಸ್ಟಿಂಗ್ ಆಪರೇಷನ್ ಬಗ್ಗೆ ಮಾಹಿತಿಗಳ ಫೈಲ್ ಹಿಡಿದುಕೊಂಡು ಹೋಗಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಹಾಸನ ಜಿಲ್ಲಾಧಿಕಾರಿ ವಿರುಧ್ಧ ಕಿಡಿ:
ಜಿಲ್ಲಾಧಿಕಾರಿಯಾದ ತಕ್ಷಣ ತಲೆಯ ಮೇಲೆ ಎರಡು ಕೊಂಬು ಇದೆಯಾ? ಸ್ವಲ್ಪ ಎಚ್ಚರಿಕೆ ಇರಲಿ. ನಾನು ಸುಮ್ಮನೆ ಮಾತಾಡೋದಿಲ್ಲ. ಒಬ್ಬ ಎಸ್ಪಿಗೆ ನೋಟಿಸ್ ಕೊಡುತ್ತಾರೆ ಎಂದರೆ ಏನರ್ಥ? ಎಸ್ಪಿ ಕೂಡ ಒಬ್ಬ ಹೆಣ್ಮಗಳು. ಜಿಲ್ಲಾಧಿಕಾರಿ ಏನು ಪಾಳೆಗಾರರಾ? ಪರಿಮಿತಿಯಲ್ಲಿ ಕೆಲಸ ಮಾಡಬೇಕು ಅಷ್ಟೇ.
ಎಲ್ಲಿ ಕೆಲಸ ಮಾಡುತ್ತಿದ್ದೀರಿ? ಎಲ್ಲಿ ಅಧಿಕಾರ ನಡೆಸಬೇಕಾದರೆ ದುರಹಂಕಾರದಲ್ಲಿ ಏನು ಮಾಡುತ್ತಿದ್ದೇನೆ ಅನ್ನೋದು ಗೊತ್ತಾಗಬೇಕು ಮೊದಲು. ಅದನ್ನೇ ನಾನು ಹೇಳಿದ್ದೇನೆ. ಪೋಸ್ಟ್ ಮಾಡೋದು, ಸ್ಟೇಟಸ್ ಹಾಕೋದು ಅಂದರೆ ಏನು? ಯಾರು ಆ ಡಿಸಿಗೆ ಪೋಸ್ಟ್ ಮಾಡೋದಕ್ಕೆ ಅವಕಾಶ ಕೊಟ್ಟಿದ್ದು?ಸಾರ್ವಜನಿಕವಾಗಿ ಯಾರಾದರೂ ಮಾತನಾಡಿದರೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಬೇಕು. ಅಷ್ಟು ಪರಿಜ್ಞಾನ ಇಲ್ಲವಾ ಈ ಜಿಲ್ಲಾಧಿಕಾರಿಗೆ? ಏನು ಪೋಸ್ಟ್ ಮಾಡ್ತಾರೆ? ಏನು ನಡೀತಾ ಇದೆ ಕರ್ನಾಟಕದಲ್ಲಿ? ಎಂದು ಕೇಂದ್ರ ಸಚಿವರು ಕಿಡಿಕಾರಿದರು.
ಈ ಅಧಿಕಾರಿ ಕೆಪಿಎಸ್ಸಿ ಕಾರ್ಯದರ್ಶಿ ಆಗಿದ್ದಾಗ ಏನು ಮಾಡಿದ್ದರು ಎನ್ನುವುದು ಗೊತ್ತಾ? ಅವರ ಹಣೆಬರಹ ಏನು ಎನ್ನುವುದು ಗೊತ್ತಾಗುತ್ತದೆ. ಅವರನ್ನು ರಜೆಯ ಮೇಲೆ ಕಳಿಸಿ ಸಂಸ್ಪೆಂಡ್ ಮಾಡಬೇಕಿತ್ತು. ಅದು ಬಿಟ್ಟು ಹಾಸನ ಜಿಲ್ಲಾಧಿಕಾರಿ ಹುದ್ದೆಯಲ್ಲಿ ತಂದು ಕೂರಿಸಿದ್ದಾರೆ ಎಂದು ಸಚಿವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಮಾಜಿ ಸದಸ್ಯ ಕೆ.ಎ. ತಿಪ್ಪೇಸ್ವಾಮಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.

