ಬೆಂಗ,ಳೂರು: ರಾಜ್ಯದ ಮಾಜಿ ಸಿಎಂ ಸಿದ್ದರಾಮಯ್ಯನವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಸ್ಟಿಂಗ್ ಆಪರೇಷನ್ ನಡೆಸಲಾಗಿದೆ ಎಂಬ ಆರೋಪದ ಸತ್ಯಾಸತ್ಯತೆ ಹೊರಬರಲು ಸರ್ಕಾರ ಸಮಗ್ರ ತನಿಖೆ ಆಗಲೇ ಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.
ಇದರ ಹಿಂದೆ ಯಾರಿದ್ದಾರೆ, ಯಾರು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂಬುದನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು, ತನಿಖೆ ನಡೆಸದೆ ‘ಕಾಲವೇ ಉತ್ತರಿಸುತ್ತದೆ ಎಂದು ಹೇಳುವುದು ಸರಿಯಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಅವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆದಿರುವ ವಿಚಾರವನ್ನು ಲಘುವಾಗಿ ಪರಿಗಣಿಸಬಾರದು. ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ, ಯಾರಿಗೆ ಯಾವ ಪಾತ್ರವಿದೆ, ಸರ್ಕಾರ ಇದುವರೆಗೆ ಏನು ಕ್ರಮ ಕೈಗೊಂಡಿದೆ ಎಂಬುದಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯನವರೇ ಈ ಪ್ರಕರಣದ ತನಿಖೆ ನಡೆಯಬೇಕು ಮತ್ತು ಸತ್ಯ ಹೊರಬರಬೇಕು ಎಂದು ಹೇಳಿದ್ದಾರೆ; ಹಾಗಿದ್ದರೂ ಸರ್ಕಾರ ತನಿಖೆಗೆ ಮುಂದಾಗಿಲ್ಲ ಏಕೆ ಎಂದು ಪ್ರಶ್ನಿಸಿದರು.
ನಾನು ಸಿದ್ದರಾಮಯ್ಯ ಅವರ ವಿರುದ್ಧ ರಾಜಕೀಯವಾಗಿ ಹೋರಾಟ ಮಾಡಿದ್ದೇನೆ. ನಮ್ಮ ಪಕ್ಷ ಬಿಟ್ಟ ನಂತರವೂ ಹಲವು ವಿಷಯಗಳಲ್ಲಿ ಅವರ ವಿರುದ್ಧ ಮಾತನಾಡಿದ್ದೇನೆ. ಆದರೆ ಮಾಜಿ ಮುಖ್ಯಮಂತ್ರಿ ಅವರ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಇಂತಹ ಕಾರ್ಯಾಚರಣೆ ನಡೆದಿದ್ದರೆ ಅದರ ಬಗ್ಗೆ ಮೌನವಾಗಿರಲು ಸಾಧ್ಯವಿಲ್ಲ ಎಂದು ಹೆಚ್ ಡಿ ಕೆ ಹೇಳಿದರು.
ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದ ಕಡತವನ್ನು ಮುಖ್ಯಮಂತ್ರಿ ಸಚಿವ ಸಂಪುಟದ ಸಭೆಗೆ ತೆಗೆದುಕೊಂಡು ಹೋಗಿರುವುದನ್ನು ಮಾಧ್ಯಮದವರು ತೋರಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಸ್ಟಿಂಗ್ ಆಪರೇಷನ್ ಕುರಿತು ತನಿಖೆ ನಡೆಸುವ ಕಡತವನ್ನು ಮುಖ್ಯಮಂತ್ರಿ ಸಂಪುಟಕ್ಕೆ ತೆಗೆದುಕೊಂಡು ಹೋಗಿದ್ದರೆ, ಪ್ರಕರಣದ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇತ್ತು ಎಂಬ ಪ್ರಶ್ನೆ ಉದ್ಭವಿಸುತ್ತದೆ, ಒಂದು ಕಡೆ ಕಡತವನ್ನು ಸಂಪುಟಕ್ಕೆ ತೆಗೆದುಕೊಂಡು ಹೋಗಿ ಚರ್ಚಿಸಿ, ಮತ್ತೊಂದು ಕಡೆ ತನಿಖೆಗೆ ಅವಕಾಶ ನೀಡದಿರುವುದೇಕೆ? ಈ ವಿಷಯವನ್ನು ರಾಜಕೀಯವಾಗಿ ಪ್ರಚಾರ ಮಾಡುವುದಕ್ಕಿಂತ ತನಿಖೆ ನಡೆಸಿ ಸತ್ಯವನ್ನು ಜನರ ಮುಂದೆ ಇಡಬೇಕು ಎಂದು ಕುಮಾರಸ್ವಾಮಿ ಹೇಳಿದರು.
ತಮ್ಮ ಬಳಿ ಇರುವ ಪೆನ್‌ಡ್ರೈವ್ ಅಸಲಿಯದ್ದು ಮತ್ತು ಅದನ್ನು ಇತರರು ನಕಲಿ ಮಾಡುತ್ತಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದರು. ಸ್ಟಿಂಗ್ ಆಪರೇಷನ್ ನಡೆದಿರುವುದು ನಿಜವೇ ಆಗಿದ್ದರೆ ಅದರಲ್ಲಿರುವವರನ್ನು ಗುರುತಿಸಿ ತನಿಖೆ ನಡೆಸಬೇಕು; ಉತ್ತರ ಪ್ರದೇಶದಿಂದ ಬಂದವರು, ಕೇಂದ್ರ ಸಚಿವರು ಅಥವಾ ಬಿಜೆಪಿಯ ನಾಯಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾತುಗಳಿದ್ದರೆ ಅವುಗಳನ್ನೂ ತನಿಖೆಯಿಂದ ಪರಿಶೀಲಿಸಬೇಕು ಎಂದು ಹೇಳಿದರು.
ಮತದಾರರ ಪಟ್ಟಿಗೆ ಸಂಬಂಧಿಸಿದ ಎಸ್‌ಐಆರ್ ಪ್ರಕ್ರಿಯೆ ಹೊಸದಲ್ಲ; ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಕುಮಾರಸ್ವಾಮಿ ಹೇಳಿದರು.
ಮತದಾರರ ಹೆಸರುಗಳನ್ನು ಕಡಿತಗೊಳಿಸಲಾಗುತ್ತಿದೆ, ಕೆಲವು ಸಮುದಾಯಗಳ ಮತದಾರರ ಸಂಖ್ಯೆ ಉದ್ದೇಶಪೂರ್ವಕವಾಗಿ ಇಳಿಸಲಾಗುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಮತದಾನದ ಹಕ್ಕು ಮಹತ್ವದ್ದೆಂಬುದನ್ನು ಒಪ್ಪಿಕೊಂಡರೂ, ಈ ವಿಚಾರವನ್ನು ರಾಜಕೀಯವಾಗಿ ಬಳಸುವ ಮೊದಲು ರಾಜ್ಯದ ಜನರ ಬದುಕು ಮತ್ತು ಸರ್ಕಾರದ ಯೋಜನೆಗಳ ಅನುಷ್ಠಾನದ ಬಗ್ಗೆಯೂ ಮಾತನಾಡಬೇಕು ಎಂದು ಅವರು ಹೇಳಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ನಿಜವಾದ ಫಲಾನುಭವಿಗಳಿಗೆ ಹಣ ತಲುಪುವಲ್ಲಿ ಲೋಪಗಳಿವೆ ಹಾಗೂ ಅರ್ಹರಲ್ಲದವರೂ ಹಣ ಪಡೆಯುತ್ತಿದ್ದಾರೆ ಎಂಬ ಕಾರಣಕ್ಕೆ ಸಮೀಕ್ಷೆ ಮತ್ತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು. ಗೃಹಲಕ್ಷ್ಮಿ ಯೋಜನೆ, ವಿಧವಾ ವೇತನ, ಅಂಗವಿಕಲರ ವೇತನ ಮತ್ತು ವೃದ್ಧಾಪ್ಯ ವೇತನಗಳ ಫಲಾನುಭವಿಗಳ ಸಂಖ್ಯೆಯಲ್ಲಿ 16ರಿಂದ 20 ಲಕ್ಷದಷ್ಟು ಕಡಿತ ಮಾಡಿರುವುದೇಕೆ, ಯಾವ ಆಧಾರದ ಮೇಲೆ ಕಡಿತ ಮಾಡಲಾಗಿದೆ ಎಂಬುದಕ್ಕೆ ಸರ್ಕಾರ ಉತ್ತರಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಶಾಸಕ ಮೇಲೂರು ರವಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

