ಶಂಕರ್ ಮಹದೇವನ್ ಹಾಡಿಗೆ ಯುವಜನತೆ ಫಿದಾ

ಮೈಸೂರು: ಯುವ ದಸರಾ ವೇದಿಕೆಯಲ್ಲಿ ಕಂಚಿನ ಕಂಠದ ಗಾಯಕ ಶಂಕರ್ ಮಹದೇವನ್,ಏಕದಂತಾಯ ವಕ್ರತುಂಡಾಯ ಗೌರಿತನಯ ಯಾ ದೀಮಹಿ ಎಂಬ ಗಣೇಶನ ಶ್ಲೋಕ ಹಾಗೂ ಓಂ ನಮಃ ಶಿವಾಯ ಹಾಡಿಗೆ ಯುವಜನ ಸಮೂಹ‌ ಭಕ್ತಿಯಲ್ಲಿ ತೇಲಿತು.

ನಗರದ ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನ ಹತ್ತಿರದ ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾ ಕಾರ್ಯಕ್ರಮದ ಎರಡನೇ ದಿನ ಶಂಕರ್ ಮಹದೇವನ್ ತಂಡವು ಹಾಡಿದ ಡ್ಯಾನ್ಸ್ ವಿತ್ ಬೇಬಿ, ಕೋಯಿ ಕಹೆ ರಹತಾ ರಹೀ, ಬೋಲ ಹಲ್ಗೆ ಹಲ್ಗೆ ಹಿಂದಿ ಗಾಯನದ ಮೋಡಿಗೆ ಕಿಕ್ಕಿರಿದು ತುಂಬಿದ್ದ ಮೈದಾನದಲ್ಲಿ ಯುವ ಸಮೂಹದ ಸಂಭ್ರಮ ಮುಗಿಲು ಮುಟ್ಟಿತ್ತು.

ಭಜರಂಗಿ ಸಿನಿಮಾದ ಜೈ ಜೈ ಭಜರಂಗಿ, ಮಾಣಿಕ್ಯ ಸಿನಿಮಾದ ಜೀವ ಜೀವ ನಮ್ ಜೀವ ಕಣೋ ಇವನು, ರಾಜ್ ಸಿನಿಮಾದ ಮುತ್ತು ರಾಜ ಕಾಲಿಟ್ಟ ಸೈಡು ಬಿಡಲೇ ಹಾಗೂ ಇನ್ನಿತರ ಕನ್ನಡ ಹಾಡುಗಳನ್ನು ಹಾಡಿ ರಂಜಿಸಿದರು.

ಹಿಂದಿ ಸರಿಗಮಪ ಖ್ಯಾತಿಯ ಜ್ಯೋತಿರ್ಮಯಿ ನಾಯಕ್ ಕೂಡ ಹಲವಾರು ಹಿಂದಿ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಇದಕ್ಕೂ ಮುನ್ನ ಯುವ ದಸರಾ ವೇದಿಕೆಯಲ್ಲಿ ಪ್ರಪಂಚದ ಬೇರೆ ಬೇರೆ ದೇಶಗಳ ಜಾನಪದ ಪರಿಕರಗಳನ್ನು‌ ಬಳಸಿಕೊಂಡು ತಮ್ಮದೇ ಶೈಲಿಯಲ್ಲಿ ಈವರೆಗೂ ಸಾವಿರಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ಕರುನಾಡ ಹೆಮ್ಮೆಯ ಬೀಟ್ ಗುರೂಸ್ ತಂಡ ಕಿಕ್ ನೀಡಿತು.

ಆಫ್ರಿಕಾ, ಅಮೇರಿಕಾ, ರಷ್ಯಾ, ಆಸ್ಟೇಲಿಯಾ ಸೇರಿದಂತೆ ವಿವಿಧ ದೇಶಗಳ ಜಾನಪದ ಸಂಗೀತ ಪರಿಕರಗಳನ್ನು ಬಳಸಿಕೊಂಡು ಹಾಗೂ ಬ್ಯಾಂಡ್, ತಮಟೆಯ ಜೊತೆ ವಿಭಿನ್ನವಾದ ಸಂಗೀತದ ಮೂಲಕ ನೆರೆದಿದ್ದ ಇಡೀ ಪ್ರೇಕ್ಷಕರನ್ನು ರಂಜಿಸಿದರು, ಯುವಕ‌ ಯುವತಿಯರು ಕುಣಿದು ಕುಪ್ಪಳಿಸಿದರು.

ಶಂಕರ್ ಮಹದೇವನ್ ಗಾಯನ ಆಲಿಸಲು ಬಂದಿದ್ದ ನಗರ ಪಾಲಿಕೆ ಆಯುಕ್ತರಾದ ಎಂ.ಕೆ ಸವಿತಾ ಹಾಗೂ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಎದ್ದು ಸ್ಟೆಪ್ ಹಾಕಿ ಎಲ್ಲರ ಗಮನ ಸೆಳೆದರು.

ಈ ವೇಳೆ ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ ತನ್ವೀರ್ ಸೇಠ್ ಹಾಗೂ ಸಂಸದ ಸುನೀಲ್ ಬೋಸ್ ಹಾಜರಿದ್ದರು.