ಬಣ್ಣದ ವಿದ್ಯುತ್ ದೀಪಗಳ ಬೆಳಕಿನ ಹಿಂದಿದೆ ಕಾಣದ ಕೈಗಳ ಪರಿಶ್ರಮ

ಮೈಸೂರು: ನಾಡಹಬ್ಬ ದಸರೆಯ ವೈಭವಕ್ಕೆ ಕಿರೀಟವಿಟ್ಟಂತೆ ಮೈಸೂರು ನಗರ ಪ್ರತಿವರ್ಷವೂ ವಿದ್ಯುತ್ ದೀಪಾಲಂಕಾರದ ಸೌಂದರ್ಯದಿಂದ ಲಕ್ಷಾಂತರ ಜನರು, ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಆದರೆ ಕಣ್ಮನ ಸೆಳೆಯುವ ವಿದ್ಯುತ್‌ ದೀಪಾಲಂಕಾರದ ಸಂಭ್ರಮದ ಹಿಂದೆ ವಿದ್ಯುತ್ ವ್ಯವಸ್ಥೆಯ ನಿರ್ವಹಣೆಗಾಗಿ ಶ್ರಮಿಸುವ ನೂರಾರು ಅಧಿಕಾರಿಗಳು ಮತ್ತು ಸಿಬ್ಬಂದಿಯ ಪರಿಶ್ರಮ ಅಡಗಿರುವುದು ಆನಂದಿಸುವವರ ಅರಿವಿಗೆ ಬರುವುದೇ ಇಲ್ಲ.

ಅರಮನೆ ಮಾತ್ರವಲ್ಲದೇ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಬಣ್ಣಬಣ್ಣದ ವಿದ್ಯುತ್‌ ದೀಪಗಳಿಂದ ಸೃಷ್ಟಿಯಾಗುವ ಬೆಳಕಿನ ಚಿತ್ತಾರ ದಸರೆಯ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಿದೆ.

ಈ ದೀಪಾಲಂಕಾರ ಕೇವಲ ಸೌಂದರ್ಯದ ಪ್ರದರ್ಶನ ಮಾತ್ರವೇ ಆಗಿರದೆ, ಸುಗಮ ನಿರ್ವಹಣೆಗೆ ತಾಂತ್ರಿಕ ಸಿದ್ಧತೆ, ಸಮನ್ವಯ ಮತ್ತು ನಿರಂತರ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ) ಯಶಸ್ವಿಯಾಗಿ ನಿರ್ವಹಿಸುತ್ತಿದೆ.

ಅದೇ ರೀತಿಯಲ್ಲಿ 2026ರ ದಸರಾ ಮಹೋತ್ಸವಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ, ಜವಾಬ್ದಾರಿವಹಿಸಲಾಗಿದೆ.

ದಸರಾ ದೀಪಾಲಂಕಾರಕ್ಕಾಗಿ ಈ ಬಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು 642 ಮಂದಿಯನ್ನು ನಿಯೋಜಿಸಲಾಗಿದೆ. ನಿಯೋಜಿಸಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ಎನ್.ಆರ್. ಮೊಹಲ್ಲಾ ವಿಭಾಗದ 323 ಮಂದಿ, ವಿ.ವಿ. ಮೊಹಲ್ಲಾ ವಿಭಾಗದ 243 ಮಂದಿ ಹಾಗೂ ಡೆಪ್ಯುಟೇಷನ್ ಮೂಲಕ ಬಂದಿರುವ 76 ಮಂದಿ. ವಿದ್ಯುತ್ ದೀಪಾಲಂಕಾರದ ಕೆಲಸ ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿ ಈ ತಂಡಗಳು ಪ್ರಮುಖ ಪಾತ್ರವಹಿಸಲಿವೆ.

ಇವರೊಂದಿಗೆ ತಾಂತ್ರಿಕ ಮೇಲ್ವಿಚಾರಣೆಗಾಗಿ 16 ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳು(ಎಇಇ), 50 ಸಹಾಯಕ ಇಂಜಿನಿಯರ್‌ಗಳು(ಎಇ) ಹಾಗೂ 56 ಕಿರಿಯ ಇಂಜಿನಿಯರ್‌ಗಳನ್ನು(ಜೆಇ) ನಿಯೋಜಿಸಲಾಗಿದೆ.

ಇವರೊಂದಿಗೆ ಮೀಟರ್ ರೀಡರ್‌ಗಳು, ಆಪರೇಟರ್‌ಗಳು, ಓವರ್‌ಸಿಯರ್‌ಗಳು, ಮೆಕ್ಯಾನಿಕ್‌ಗಳು, ಸಹಾಯಕ ಸ್ಟೋರ್ ಕೀಪರ್‌ಗಳು, ಲೈನ್ ಮೆಕ್ಯಾನಿಕ್‌ಗಳು ಹಾಗೂ ಪವರ್‌ಮ್ಯಾನ್‌ಗಳು ಸೇರಿದಂತೆ ವಿವಿಧ ವರ್ಗಗಳ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಂಧನ ಸಚಿವರಾದ ಕೆ.ಜೆ. ಜಾರ್ಜ್‌ ಅವರ ಸಲಹೆ ಹಾಗೂ ಮಾರ್ಗದರ್ಶನದೊಂದಿಗೆ ಶಾಸಕರು ಹಾಗೂ ಸೆಸ್ಕ್‌ ಅಧ್ಯಕ್ಷರಾದ ರಮೇಶ್‌ ಬಂಡಿಸಿದ್ದೇಗೌಡ ಅವರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಎಸ್.‌ ಅರ್ಚನಾ ಅವರ ನೇತೃತ್ವದಲ್ಲಿ ದೀಪಾಲಂಕಾರದ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ.

ಇವರೊಂದಿಗೆ ಸೆಸ್ಕ್‌ ತಾಂತ್ರಿಕ ನಿರ್ದೇಶಕರಾದ ಎಲ್.‌ ಲೋಕೇಶ್‌, ಮೈಸೂರು ವೃತ್ತದ ಅಧೀಕ್ಷಕ ಇಂಜಿನಿಯರ್‌ ಸುನೀಲ್‌ ಕುಮಾರ್‌, ಕಾರ್ಯಪಾಲಕ ಇಂಜಿನಿಯರ್‌ಗಳಾದ ಮಾದೇಶ್‌ ಹಾಗೂ ಸಂದೀಪ್‌ ಅವರುಗಳು ದೀಪಾಲಂಕಾರದ ನಿರ್ವಹಣೆ ಹಾಗೂ ಮೇಲ್ವಿಚಾರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ದಸರಾ ಮಹೋತ್ಸವದ ಸಂದರ್ಭದಲ್ಲಿ ವಿದ್ಯುತ್ ವ್ಯವಸ್ಥೆ ಸುಗಮವಾಗಿ ಹಾಗೂ ಸುರಕ್ಷಿತವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಅತ್ಯಂತ ಮಹತ್ವದ ಜವಾಬ್ದಾರಿ.

ದೀಪಾಲಂಕಾರದ ವ್ಯವಸ್ಥೆಗಳ ನಿರ್ವಹಣೆ, ತಾಂತ್ರಿಕ ಪರಿಶೀಲನೆ, ಮೇಲ್ವಿಚಾರಣೆ ಹಾಗೂ ಸಮಸ್ಯೆಗಳು ಎದುರಾದಾಗ ಅವುಗಳಿಗೆ ತಕ್ಷಣ ಸ್ಪಂದಿಸುವ ಕಾರ್ಯಗಳಲ್ಲಿ ಸಿಬ್ಬಂದಿಯ ಸೇವೆ ಅಗತ್ಯವಾಗುತ್ತದೆ. ಇಂತಹ ದೊಡ್ಡ ಪ್ರಮಾಣದ ಕೆಲಸಗಳಲ್ಲಿ ತಾಂತ್ರಿಕ ಜ್ಞಾನ, ಸಮಯಪ್ರಜ್ಞೆ, ಸುರಕ್ಷತಾ ಕ್ರಮಗಳ ಪಾಲನೆ ಮತ್ತು ಪರಸ್ಪರ ಸಮನ್ವಯ ಮುಖ್ಯವಾಗಿವೆ.

ಮೈಸೂರು ದಸರಾ ಸಂದರ್ಭದಲ್ಲಿ ವಿದ್ಯುತ್ ದೀಪಾಲಂಕಾರ‌ ಮೈಸೂರು ನಗರದ ಸೌಂದರ್ಯ ಹೆಚ್ಚಿಸಿ, ವಿಶಿಷ್ಟ ಅನುಭವ ನೀಡುತ್ತದೆ. ಈ ವೈಭವ, ಸಂಭ್ರಮವನ್ನು ಸಾಕಾರಗೊಳಿಸುವ ಕಾರ್ಯದಲ್ಲಿ ಸೆಸ್ಕ್‌ನ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕೊಡುಗೆ ಸ್ಮರಣೀಯವಾಗಿದೆ. ಕಣ್ಣಿಗೆ ಕಾಣುವ ಬೆಳಕಿನ ಹಿಂದೆ ಅಡಗಿರುವ ಕಾಣದ ಕೈಗಳ ಸೇವೆ ದಸರೆಯ ಸಂಭ್ರಮದ ಅವಿಭಾಜ್ಯ ಭಾಗವಾಗಿದೆ ಎಂದು ಸೆಸ್ಕ್‌
ವ್ಯವಸ್ಥಾಪಕ ನಿರ್ದೇಶಕಿ ಎಂ.ಎಸ್.‌ ಅರ್ಚನಾ ತಿಳಿಸಿದ್ದಾರೆ.