ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕ ದಿನಗಣನೆ ಪ್ರಾರಂಭವಾಗಿದ್ದು, ಸಾಂಸ್ಕೃತಿಕ ನಗರಿಯಲ್ಲಿ ಭದ್ರತೆ ಬಿಗಿಗೊಳಿಸಿರುವ ನಗರ ಪೊಲೀಸರು ವಿಶೇಷ ಕಾರ್ಯಾಚರಣೆಗೆ ಇಳಿದು ಎಲ್ಲೆಡೆ ಹದ್ದಿನ ಕಣ್ಣಿರಿಸಿದ್ದಾರೆ
ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಮೈಸೂರಿಗೆ ಹೊಸದಾಗಿ ಬಂದು ವಾಸ್ತವ್ಯ ಹೂಡಿರುವ ಪ್ರತಿಯೊಬ್ಬರ ಮೇಲೂ ಹದ್ದಿನ ಕಣ್ಣಿಡಲಾಗಿದೆ.
ನಗರದಲ್ಲಿನ ಎಲ್ಲಾ ಲಾಡ್ಜ್, ಹೋಂ ಸ್ಟೇ, ಸರ್ವಿಸ್ ಅಪಾರ್ಟ್ಮೆಂಟ್ ಸೇರಿದಂತೆ ಎಲ್ಲಾ ವಾಸ್ತವ್ಯದ ಸ್ಥಳಗಳಲ್ಲಿ ಪ್ರತಿದಿನ ತಪಾಸಣೆ ನಡೆಸಿ, ಅಲ್ಲಿ ಉಳಿದುಕೊಂಡಿರುವವರ ವಿವರ ಸಂಗ್ರಹಿಸಲಾಗುತ್ತಿದೆ.
ಅಲ್ಲದೆ ದಸರಾ ನೋಡಲು ಮೈಸೂರಿಗೆ ಬಂದಿರುವ ವಿದೇಶಿ ಪ್ರವಾಸಿಗರನ್ನು ಖುದ್ದಾಗಿ ಭೇಟಿ ಮಾಡಿ, ಅವರ ಪಾಸ್ಪೋರ್ಟ್, ವೀಸಾ ಸೇರಿದಂತೆ ದಾಖಲಾತಿಗಳನ್ನು ಪರಿಶೀಲಿಸಲಾಗುತ್ತಿದೆ.
ದಸರಾ ಸಮಯದಲ್ಲಿ ಬಲೂನ್, ಆಟಿಕೆ ಮಾರಾಟ ಮತ್ತು ಕೂಲಿ ಕೆಲಸಕ್ಕೆಂದು ಬಂದವರನ್ನೂ ಬಿಡದೆ ಪ್ರತಿದಿನ ವಿಚಾರಣೆ ನಡೆಸಿ ಅವರ ಮೂಲ ವಿಳಾಸ, ಗುರುತಿನ ಚೀಟಿಗಳನ್ನು ಸಂಗ್ರಹಿಸಲಾಗುತ್ತಿದೆ.
ದಸರಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ವಿಶೇಷ ತಪಾಸಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

