ಮೈಸೂರು: ಯೋಗಕ್ಕೆ ಜಾತಿ, ಧರ್ಮ ಹಾಗೂ ವಯಸ್ಸಿನ ಯಾವುದೇ ಅಂತರವಿಲ್ಲ. ಯಾವುದೇ ವಯಸ್ಸಿನವರು ಬೇಕಾದರೂ ಯೋಗವನ್ನು ಮಾಡಬಹುದು ಎಂದು ಕೃಷ್ಣರಾಜ ಕ್ಷೇತ್ರದ ವಿಧಾನಸಭೆ ಶಾಸಕರಾದ ಟಿಎಸ್ ಶ್ರೀವತ್ಸ ಅವರು ಹೇಳಿದರು.
ಇಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದ ಪಿ ಕಾಳಿಂಗ ರಾವ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಯೋಗಾಸನ ಸ್ವರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೈಸೂರಿನಲ್ಲಿ ಅನೇಕ ಯೋಗ ಬಂಧುಗಳು ಹಾಗೂ ಶಿಕ್ಷಕರು ಉಚಿತವಾಗಿ ಯೋಗವನ್ನು ಹೇಳಿಕೊಡುತ್ತಾ ಸಮಾಜವನ್ನು ಆರೋಗ್ಯವಂತರನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ. ಸರ್ಕಾರವು ಅತ್ಯಂತ ಉತ್ತಮ ರೀತಿಯಲ್ಲಿ ದಸರಾ ಕಾರ್ಯಕ್ರಮದ ಮುಖಾಂತರ ಯೋಗವನ್ನು ಹಾಗೂ ಯೋಗದಸರವನ್ನು ಹಮ್ಮಿಕೊಂಡು, ಇದರ ಮುಖಾಂತರ ರಾಜ್ಯಮಟ್ಟದ ಸಂದೇಶವನ್ನು ನೀಡಲು ಆನ್ಲೈನ್ ರಿಜಿಸ್ಟ್ರೇಷನ್ ಮೂಲಕ ರಾಜ್ಯಮಟ್ಟದ ಸ್ಪರ್ಧೆಯನ್ನು ಆಯೋಜಿಸಿದೆ ಎಂದರು.
ಮೈಸೂರು ಎಂದರೇ ಅರಮನೆ, ಗುರುಮನೆ, ಯೋಗಮನೆ. ಮೈಸೂರು ನಗರವು ಯೋಗಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ. ರಾಜಾಶ್ರಯದಿಂದ ಹಿಡಿದು ಕಳೆದ 12 ವರ್ಷಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಜೂನ್ 21ರಂದು ಮೈಸೂರಿನ ಅರಮನೆಯ ಮುಂಭಾಗ ಹಾಗೂ ಇಡೀ ಮೈಸೂರಿನಲ್ಲಿ ಸುಮಾರು 15,000ಕ್ಕೂ ಹೆಚ್ಚು ಜನ ಹಾಗೂ ಇಡೀ ಮೈಸೂರಿನ ವಿವಿಧ ಕಡೆಗಳಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಯೋಗವನ್ನು ಮಾಡುವ ಮೂಲಕ ದೊಡ್ಡ ಯಶಸ್ಸು ಕಂಡಿದೆ. ಮುಂಬರುವ 2027ರ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಇಡೀ ರಾಜ್ಯದಲ್ಲಿ 2 ಕೋಟಿ ಜನ ಯೋಗ ಮಾಡುವಂತೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
ಯೋಗ ದಸರ ಉಪ ಸಮಿತಿ ಹಾಗೂ ಉಪ ವಿಶೇಷ ಅಧಿಕಾರಿಯಾದ ರಮ್ಯಾ ಕೆ ಅವರು ಮಾತನಾಡಿ ವೇದಿಕೆಗೆ ಬರುವ ಮುನ್ನ ತಾವೆಲ್ಲರೂ ಎಷ್ಟು ವರ್ಷ ಮತ್ತು ದಿನಗಳು ಸತತವಾಗಿ ಪರಿಶ್ರಮದಿಂದ ಅಭ್ಯಾಸ ಮಾಡಿ ಇಂದು ಇಲ್ಲಿ ಬಂದು ಭಾಗವಹಿಸಿದ್ದೀರಿ. ಪ್ರತಿದಿನ ಮುಂಜಾನೆ ಬೇಗ ಎದ್ದು, ಚಳಿ-ಮಳೆಯನ್ನು ಲೆಕ್ಕಿಸದೆ ನೋವನ್ನು ಸಹಿಸಿಕೊಂಡು ನೀವು ಮಾಡಿದ ಸಾಧನೆಯೇ ಇಂದು ನಿಮ್ಮನ್ನು ಮೊದಲಾಗಿರಿಸಿದೆ. ಧೈರ್ಯದಿಂದ ಈ ವೇದಿಕೆಯಲ್ಲಿ ಭಾಗವಹಿಸಿರುವುದು ನಿಮ್ಮ ಮೊದಲ ಗೆಲುವಾಗಿದ್ದು, ಇಲ್ಲಿರುವ ಪ್ರತಿಯೊಬ್ಬರೂ ಈಗಾಗಲೇ ವಿಜೇತರಾಗಿದ್ದಾರೆ ಎಂದರು.
ಸ್ಪರ್ಧೆಯಲ್ಲಿ ಬಹುಮಾನಗಳು ಕೆಲವರಿಗೆ ಮಾತ್ರ ಸಿಗುತ್ತದೆ, ಆದರೆ ಬಹುಮಾನ ಸಿಗದಿದ್ದರೆ ಸೋತಿದ್ದೀರಿ ಎಂದರ್ಥವಲ್ಲ. ಪದಕ ಒಂದು ಸಂಭ್ರಮವಾದರೆ, ಯೋಗಾಭ್ಯಾಸವು ಜೀವನಪೂರ್ತಿ ಆರೋಗ್ಯ, ಶಿಸ್ತು, ಸಂಯಮ ಮತ್ತು ಮನಶಾಂತಿಯನ್ನು ನೀಡುತ್ತದೆ. ಸೋಲು ಎಂಬುದು ಕೊನೆಯಲ್ಲ, ಅದು ಕಲಿಯುವ ಮತ್ತೊಂದು ಘಟ್ಟ ಎಂದು ಹೇಳಿದರು.
ನಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡುವುದಷ್ಟೇ ನಮ್ಮ ಕೈಯಲ್ಲಿದೆ, ಫಲದ ಬಗ್ಗೆ ಚಿಂತಿಸಬೇಡಿ ಎಂಬ ತತ್ವವನ್ನು ಯೋಗ ಸ್ಪರ್ಧಿಗಳು ಅಳವಡಿಸಿಕೊಳ್ಳಬೇಕು. ಗೆದ್ದಾಗ ಅಹಂಕಾರ ಪಡದೆ, ಸೋತಾಗ ನಿರಾಶರಾಗದೆ ಇರುವುದೇ ನಿಜವಾದ ಯೋಗಿಯ ಗುಣಲಕ್ಷಣ. ಸ್ಪರ್ಧೆಯ ಸಮಯದಲ್ಲಿ ಯಾವುದೇ ಆತಂಕಕ್ಕೆ ಒಳಗಾಗದೆ, ಇತರರ ಪ್ರದರ್ಶನವನ್ನು ನೋಡಿ ನಿಮ್ಮ ಸಾಮರ್ಥ್ಯವನ್ನು ಕಡೆಗಣಿಸಬೇಡಿ. ಶಾಂತವಾದ ಮನಸ್ಸಿನಿಂದ, ಏಕಾಗ್ರತೆ ಹಾಗೂ ಆತ್ಮವಿಶ್ವಾಸದಿಂದ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಎಂದರು.
ನಿಮ್ಮ ಜೊತೆಯಲ್ಲಿರುವ ಸ್ಪರ್ಧಿಗಳು ನಿಮ್ಮ ಶತ್ರುಗಳಲ್ಲ, ಅವರೂ ಕೂಡ ನಿಮ್ಮಂತೆ ಯೋಗದಲ್ಲಿ ಅಭ್ಯಾಸ ಮಾಡಿ ಬಂದಿರುವ ಸ್ಪರ್ಧಿಗಳಾಗಿದ್ದು, ಅವರು ಚೆನ್ನಾಗಿ ಮಾಡಿದಾಗ ಮನಪೂರ್ವಕವಾಗಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ಎಂದರು.
ಯೋಗ ದಸರಾ 2026 ನೋಂದಣಿ ವರದಿ
ಕರ್ನಾಟಕ ಸರ್ಕಾರದ ಯೋಗ ದಸರಾ ಉಪಸಮಿತಿ ಆಯೋಜಿಸಿರುವ ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಗೆ ಒಟ್ಟು 1,526 ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದಾರೆ. ನೋಂದಾಯಿತ ಒಟ್ಟು ಸ್ಪರ್ಧಿಗಳಲ್ಲಿ 851 ಮಹಿಳೆಯರು/ಬಾಲಕಿಯರು (55.8% ಅಥವಾ ಸುಮಾರು 56%) ಹಾಗೂ 675 ಪುರುಷರು/ಬಾಲಕರು (44.2% ಅಥವಾ ಸುಮಾರು 44%) ಇದ್ದಾರೆ. ಅಲ್ಲದೆ, ಈ ಸ್ಪರ್ಧೆಯಲ್ಲಿ 93 ವಿಶೇಷ ಚೇತನ ಸ್ಪರ್ಧಿಗಳು, ಕರ್ನಾಟಕದ 30 ಜಿಲ್ಲೆಗಳ ಸ್ಪರ್ಧಿಗಳು ಹಾಗೂ 78 ವರ್ಷದ ಹಿರಿಯ ಸ್ಪರ್ಧಿಯೂ ಭಾಗವಹಿಸುತ್ತಿದ್ದಾರೆ.
ವಯೋಮಾನ ಹಾಗೂ ವಿಭಾಗವಾರು ವಿವರಗಳು
ಒಟ್ಟು 1,526 ಸ್ಪರ್ಧಿಗಳಲ್ಲಿ 1,011 ಮಂದಿ (66%) 8 ರಿಂದ 18 ವರ್ಷದೊಳಗಿನ ಕಿರಿಯ ವಯಸ್ಸಿನವರಾಗಿದ್ದಾರೆ (ವಿಭಾಗ 1 ರಿಂದ 4) ವಯೋಮಾನದ ಆಧಾರದಲ್ಲಿ ಒಟ್ಟು 12 ವಿಭಾಗಗಳಾಗಿ ವಿಂಗಡಿಸಲಾಗಿದ್ದು, ವಿಭಾಗ 2ರಲ್ಲಿ (10–12 ವರ್ಷ) ಗರಿಷ್ಠ 326 ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದಾರೆ. 65 ವರ್ಷಕ್ಕಿಂತ ಮೇಲ್ಪಟ್ಟವರ ವಿಭಾಗದಲ್ಲಿ (ವಿಭಾಗ 11) 38 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಹಾಗೆಯೇ ಯಾವುದೇ ವಯೋಮಿತಿಯಿಲ್ಲದ ವಿಶೇಷ ಚೇತನರ ವಿಭಾಗದಲ್ಲಿ (ವಿಭಾಗ 12) ಒಟ್ಟು 93 ಸ್ಪರ್ಧಿಗಳು (42 ಮಹಿಳೆಯರು ಮತ್ತು 51 ಪುರುಷರು) ನೋಂದಾಯಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಆಯುಬ್ ಖಾನ್, ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ರುದ್ರೇಶ್, ಕಾರ್ಯಾಧ್ಯಕ್ಷರಾದ ನಿರೂಪ್ ವೆಸ್ಲಿ, ಕಾರ್ಯದರ್ಶಿಯಾದ ಡಾ. ರೇಣುಕಾ ದೇವಿ ಸಿ, ಮೈಸೂರು ಯೋಗ ಕೂಟದ ಅಧ್ಯಕ್ಷರಾದ ರಮೇಶ್, ಮೈಸೂರು ಯೋಗ ಅಸೋಸಿಯೇಷನ್ ಅಧ್ಯಕ್ಷರಾದ ಪಶುಪತಿ, ಯೋಗ ದಸರಾ ಉಪಸಮಿತಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

