ಮೈಸೂರು: ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಕೇಂದ್ರ ಕಾರಾಗೃಹದ ವತಿಯಿಂದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ತೆರೆಯಲಾಗಿರುವ ಕಾರಾಗೃಹ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಇಲಾಖೆಯ ಮಹಾನಿರ್ದೇಶಕರಾದ ಆಲೋಕ್ ಕುಮಾರ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅಲೋಕ್ ಕುಮಾರ್ ಅವರು, ಬಳ್ಳಾರಿ, ಮೈಸೂರು ಬೆಂಗಳೂರು ಮತ್ತಿತರ ಕೇಂದ್ರ ಕಾರಾಗೃಹಗಳಲ್ಲಿ ಕೈದಿಗಳು ತಯಾರಿಸಿರುವ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಉತ್ತಮ ಗುಣಮಟ್ಟದ ವಸ್ತುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಪನ್ನಗಳನ್ನು ಖರೀದಿ ಮಾಡಿ ಕೈದಿಗಳ ಪುನರ್ವಸತಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಚೇರಿಯ ಡಿಐಜಿ (ಆಡಳಿತ) ಜಿನೇಂದ್ರ ಖನಗಾವಿ, ಎಐಜಿ ಪಿ. ವಿ. ಆನಂದ ರೆಡ್ಡಿ, ಮೈಸೂರು ಕಾರಾಗೃಹ ಮುಖ್ಯ ಅಧೀಕ್ಷಕ ಶೇಷ ಮೂರ್ತಿ ಹಾಗೂ ದಕ್ಷಿಣ ವಲಯದ ಡಿಐಜಿ ಕೆ. ಸಿ. ದಿವ್ಯಶ್ರೀ ಭಾಗವಹಿಸಿದ್ದರು.

