ಹಾಸನ: 2028ಕ್ಕೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ ಬರುವುದು ನಿಶ್ಚಿತ, ಈಗಿರುವ ಮುಖ್ಯಮಂತ್ರಿ ಇರುವುದಿಲ್ಲ, ಆಗ ಈ ಕುಮಾರಸ್ವಾಮಿಯ ಇನ್ನೊಂದು ಮುಖ ತೋರಿಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಹಾಸನದಲ್ಲಿ ಶಾಸಕ ಸ್ವರೂಪ ಪ್ರಕಾಶ್ ಅವರ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹೆಚ್ ಡಿ ಕೆ, ನನ್ನನ್ನು ಆತ ಉತ್ತರ ಕುಮಾರ, ನಿರುದ್ಯೋಗಿ ಎಂದು ಕರೆದಿದ್ದಾರೆ. ಆತನನ್ನು ಗೃಹ ಸಚಿವ ಎಂದು ಕರೆಯಲು ಆಗುತ್ತದೆಯೇ ಈ ಮಂತ್ರಿಯ ನಡೆ, ವರಸೆ ನೋಡಿದರೆ ಸ್ಟಿಂಗ್ ವಿಚಾರದಲ್ಲಿ ದೊಡ್ಡ ಹುನ್ನಾರ ನಡೆದಿದೆ ಎಂಬ ಅನುಮಾನ ಬರುತ್ತಿದೆ. ಇಡೀ ರಾಜ್ಯದ ದಿಕ್ಕು ತಪ್ಪಿಸಲು, ಸದಾಕಾಲ ಕುಮಾರಸ್ವಾಮಿಯನ್ನು ಪ್ರಚೋದಿಸಲು ಮುಖ್ಯಮಂತ್ರಿಯವರು ಪ್ರಿಯಾಂಕ್ ಖರ್ಗೆಗೆ ಸುಪಾರಿ ಕೊಟ್ಟಿರಬಹುದು ಕೊಟ್ಟಿದ್ದರೆ ಕೊಡಲಿ ಎಂದು ಕಿಡಿಕಾರಿದರು.
ಈ ವ್ಯಕ್ತಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ಮಂತ್ರಿ ಆಗಿದ್ದಾಗ ನಡೆದಿರುವ ಕೆಪಿಎಸ್ಸಿ ಹಗರಣದ ಬಗ್ಗೆ ಎಲ್ಲ ಮಾಹಿತಿ ಇದ್ದರೂ ಎಲ್ಲಿದೆ ಹಗರಣ ಎಂದು ಕೇಳುತ್ತಾರೆ. ನಾನು ಸಾಲು ಸಾಲಾಗಿ ದಾಖಲೆಗಳನ್ನು ಬಿಡುಗಡೆ ಮಾಡಿದರೂ ಅದರ ಬಗ್ಗೆ ತುಟಿ ಬಿಚ್ಚದ ಈ ಖರ್ಗೆ, ಅದೇ ಬೇರೆ ವಿಷಯಗಳು ಬಂದ ಕೂಡಲೇ ಕೂಗಾಡುತ್ತಾರೆ.ಕೆಪಿಎಸ್ಸಿ ಹಗರಣದ ವಿಚಾರದಲ್ಲಿ ಅವರ ಬಳಿ ಉತ್ತರವೇ ಇಲ್ಲ. ಜತೆಗೆ ಸ್ಟಿಂಗ್ ಆಪರೇಷನ್ ನಾನೇ ಮಾಡಿದ್ದು ಎಂದು ಅಪರಾಧಿ ಹೇಳಿದ್ದರೂ ಅವನನ್ನು ಮುಟ್ಟುವ ಧೈರ್ಯ ಈ ಮಂತ್ರಿಗೆ ಇಲ್ಲ. ಈಗಲೂ ಆರೋಪಿಯನ್ನು ರಕ್ಷಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಇವರೆಲ್ಲ ಸಿದ್ದರಾಮಯ್ಯ ಅವರಿಗೆ ಚಿರಋಣಿ ಇರಬೇಕು. ಅವರೊಬ್ಬರು ಇಲ್ಲದಿದ್ದರೆ ಇಷ್ಟೊತ್ತಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವೇ ಮುಗಿದು ಹೋಗುತ್ತಿತ್ತು. ಅಂತ ವ್ಯಕ್ತಿಯನ್ನು ಮುಗಿಸಲು ಈ ಪ್ರಿಯಾಂಕ ಖರ್ಗೆ, ಹಾಲಿ ಮುಖ್ಯಮಂತ್ರಿ ಎಲ್ಲರೂ ಸೇರಿಕೊಂಡು ಸ್ಟಿಂಗ್ ಮಾಡುವ ಕಿರಾತಕರನ್ನು ಜತೆಯಲ್ಲಿಟ್ಟುಕೊಂಡು ಅವರ ಅಧಿಕಾರವನ್ನು ಕಿತ್ತುಕೊಂಡರು ಎಂದು ಆರೋಪಿಸಿದರು.
ಇವರೇನು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರೆಯೇ ಇನ್ನೊಂದು ವರ್ಷ ಕಳೆಯಲಿ. ಜನಾದೇಶ ಬರುತ್ತದೆ. ಇವರ ಅಕ್ರಮಗಳಿಗೆ ಕರ್ನಾಟಕದ ಜನ ತಕ್ಕ ಪಾಠ ಕಲಿಸುತ್ತಾರೆ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಆಗ ನನ್ನ ಇನ್ನೊಂದು ಮುಖವನ್ನು ಇವರೆಲ್ಲರಿಗೂ ತೋರಿಸುತ್ತೇನೆ. ಕುಮಾರಸ್ವಾಮಿ ಏನು ಎಂಬುದು ಇವರಿಗೆ ಅರಿವು ಮಾಡಿಸುತ್ತೇನೆ ಎಂದು ಗುಡುಗಿದರು.
ನಿನ್ನೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸ್ಟಿಂಗ್ ಮಾಡಿದ ಆರೋಪಿಗಳ ಮೇಲೆ ದೂರು ಕೊಡಲು ಹೋಗಿದ್ದೆವು. ಪಾಪ.. ಅಲ್ಲಿ ಹಾಜರಿದ್ದವರ ಮುಖಭಾವ ನೋಡಿದರೆ ಸರಿಯಾದ ತನಿಖೆ ನಡೆಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಅವರಿಂದ ಯಾವುದೇ ಭಾವನೆಗಳು ವ್ಯಕ್ತವಾಗಲಿಲ್ಲ ಹಾಗೂ ಪ್ರತಿಕ್ರಿಯೆ ಕೂಡ ಸಿಗಲಿಲ್ಲ. ಪಾಪ.. ಅವನ ಸ್ಟಿಂಗ್ ಖೆಡ್ಡಾದಲ್ಲಿ ಅದೆಷ್ಟು ಪೊಲೀಸರು ಬಿದ್ದಿದ್ದಾರೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಎಸ್ಟಿ ಸಮುದಾಯ ಹಿರಿಯ ನಾಯಕರಾದ ರಮೇಶ್ ಜಾರಕಿಹೋಳಿ ಅವರ ವಿರುದ್ಧ ಸಂಚು ಮಾಡಿದವರು ಯಾರು, ಸಿದ್ದರಾಮಯ್ಯ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದ ಕೆ.ಎನ್ ರಾಜಣ್ಣ ಅವರ ವಿರುದ್ಧ ಟ್ರ್ಯಾಪ್ ಮಾಡಿಸಲು ದಶಪ್ರಯತ್ನ ನಡೆಸಿದ್ದು ಯಾರು, ಸ್ವತಃ ರಾಜಣ್ಣ ಅವರೇ ವಿಧಾನಸಭೆಯಲ್ಲಿ ಹೇಳಿದರಲ್ಲಪ್ಪ ಪ್ರಿಯಾಂಕ ಖರ್ಗೆ.. ಅವತ್ತೇನು ಸದನದಲ್ಲಿ ಕಣ್ಣು ಕಿವಿ ಎಲ್ಲವನ್ನು ಮುಚ್ಚಿಕೊಂಡು ಕುಳಿತಿದ್ದೆಯಾ ಎಂದು ಕೇಂದ್ರ ಸಚಿವರು ಗುಡುಗಿದರು.
ಹಿಂದೆ ನಾನು ಮೊದಲ ಬಾರಿ ಸಿಎಂ ಆಗಿದ್ದಾಗ ನನ್ನ ವಿರುದ್ಧ 150 ಕೋಟಿ ಗಣಿ ಲಂಚ ಆರೋಪ ಮಾಡಲಾಯಿತು. ಜನಾರ್ದನರೆಡ್ಡಿಯಿಂದ ನನ್ನ ಮೇಲೆ ಆರೋಪ ಮಾಡಿಸಿದರು. ಆಗಲು ನಾನು ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ. ನಮ್ಮ ಕುಟುಂಬದ ಮುಗಿಸಲು ಹೊರಟಿದ್ದಾರೆ. ಹಾಸನಾನಾಂಬೆ ದೇಗುಲ ಬಾಗಿಲು ಶೀಘ್ರವಾಗಿ ತೆರೆಯಲಿದೆ. ಇಲ್ಲಿ ಕುಳಿತು ಮಾತಾಡುತ್ತಿದ್ದೇನೆ. 2028ಕ್ಕೆ ಸಮ್ಮಿಶ್ರ ಸರ್ಕಾರ ಬರೋದು ಶತಸಿದ್ಧ. ಕುಮಾರಸ್ವಾಮಿಯ ಇನ್ನೊಂದು ಮುಖ ತೋರಿಸುತ್ತೇನೆ ಎಂದು ಪುನರುಚ್ಛರಿಸಿದರು.
ರಾಜ್ಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಸಿದ್ದರಾಮಯ್ಯ ಅವರು ಬಾಯಿ ಬಿಡುತ್ತಿಲ್ಲ. ಅವರು ಮೌನಕ್ಕೆ ಶರಣಾಗಿದ್ದಾರೆ. ಇದು ನನಗೆ ಅಚ್ಚರಿ ಉಂಟು ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದರು.
ಮಾಧ್ಯಮಗೋಷ್ಟಿಯಲ್ಲಿ ಶಾಸಕರಾದ ಎ.ಮಂಜು, ಸ್ವರೂಪ್ ಪ್ರಕಾಶ್ ಸೇರಿದಂತೆ ಜೆಡಿಎಸ್ ಪಕ್ಷದ ಹಲವು ಮುಖಂಡರು ಹಾಜರಿದ್ದರು.

