ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜತೆ ಶ್ರೀರಂಗಪಟ್ಟಣ ಬಗ್ಗೆ ಹೆಚ್.ಡಿ.ಕೆ ಚರ್ಚೆ

ನವದೆಹಲಿ, ಅ.1: ಸ್ವದೇಶ್ ದರ್ಶನ್ 2.0 ಯೋಜನೆಯಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸುವ ಕುರಿತು ಕೇಂದ್ರ ಸಚಿವ‌‌ರೂ ಸಂಸದರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರವಾಸೋದ್ಯಮ ಸಚಿವರನ್ನು ಭೇಟಿಯಾದರು.

ಶ್ರೀರಂಗಪಟ್ಟಣವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸುವ ಕುರಿತು ಕೇಂದ್ರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಶ್ರೀರಂಗಪಟ್ಟಣವು ಐಹಾಸಿಕವಾಗಿ ಬಹುಮುಖ್ಯ ತಾಣವಾಗಿದ್ದು, ಇತಿಹಾಸ ಪ್ರಸಿದ್ಧ ಶ್ರೀ ರಂಗನಾಥ ಸ್ವಾಮಿ ಸನ್ನಿಧಿ ಸೇರಿದಂತೆ ಹಲವಾರು ದೇವಾಲಯಗಳು ಮತ್ತು ಪ್ರವಾಸಿ ತಾಣಗಳಿವೆ. ಇಂತಹ ಅಪರೂಪದ ತಾಣವನ್ನು ಪ್ರವಾಸೋದ್ಯಮ ಕೇಂದ್ರಿತ ತಾಣವನ್ನಾಗಿ ಅಭಿವೃದ್ಧಿ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಕೋರಿದರು.

ಈ ಬಗ್ಗೆ ಶೇಖಾವತ್ ಅವರಿಗೆ ಸಲ್ಲಿಸಲಾದ ವಿಸ್ತೃತ ಯೋಜನಾ ವರದಿಯು ಶ್ರೀರಂಗಪಟ್ಟಣದ ಶ್ರೀಮಂತ ಪರಂಪರೆ ಮತ್ತು ಪ್ರವಾಸೋದ್ಯಮ ಸಾಮರ್ಥ್ಯದ ಕೇಂದ್ರೀಕೃತ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿದೆ. ಕರ್ನಾಟಕದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಬಲಪಡಿಸಲು ಕೇಂದ್ರದ ಬೆಂಬಲವನ್ನು ಕೋರಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.

ನನ್ನ ಮನವಿಯ ಬಗ್ಗೆ ಸಚಿವ ಶೇಖಾವತ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಬಗ್ಗೆ ಆದ್ಯತೆಯ ಮೇರೆಗೆ ಪರಿಶೀಲಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ. ಶ್ರೀರಂಗಪಟ್ಟಣದ ಬಗ್ಗೆ ಅವರಿಗೆ ವಿಶೇಷವಾದ ಆಸಕ್ತಿ ಇದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.