ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಗೆ ಅಳವಡಿಸಿರುವ ವಿದ್ಯುತ್ ದೀಪಗಳ ವ್ಯವಸ್ಥೆಗೆ ಶನಿವಾರ ಸಂಜೆ ಚಾಲನೆ ದೊರೆಯಿತು.
ಶಾಸಕ ಸಿ.ಪುಟ್ಟರಂಗ ಶೆಟ್ಟಿ ಅವರು ನಗರದ ಡಿವೈಎಸ್ಪಿ ಕಚೇರಿ ಬಳಿ ನಡೆದ ಸರಳ ಕಾರ್ಯಕ್ರಮದಲ್ಲಿ ಸ್ವಿಚ್ ಒತ್ತುವ ಮೂಲಕ ವಿದ್ಯುತ್ ದೀಪ ಬೆಳಕಿನ ವ್ಯವಸ್ಥೆಯನ್ನು ಉದ್ಘಾಟಿಸಿದರು.
ಶಾಸಕರಾದ ಎನ್.ಮಹೇಶ್, ಸಿ.ಎಸ್.ನಿರಂಜನ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ ಅವರು ಸಾಥ್ ನೀಡಿದರು.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪಂಚಾಯತ್ ಸದಸ್ಯ ಕೆರೆಹಳ್ಳಿ ನವೀನ್, ನಗರ ಸಭೆ ಆಯುಕ್ತ ರಾಜಣ್ಣ, ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಕೆ.ಸುರೇಶ್ ಇತರರು ಹಾಜರಿದ್ದರು.
ಬಿ.ರಾಚಯ್ಯ ಜೋಡಿ ರಸ್ತೆ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 35 ಕೋಟಿ ರೂ ವೆಚ್ಚದಲ್ಲಿ ಪೂರ್ಣಗೊಳಿಸಿತ್ತು. ವಿದ್ಯುತ್ ಕಂಬಗಳನ್ನು ಮಾತ್ರ ಅಳವಡಿಸಿದ್ದು ವಿದ್ಯುತ್ ದೀಪ ಅಳವಡಿಸಿರಲಿಲ್ಲ. ನಗರ ಸಭೆಯಿಂದ 10 ಲಕ್ಷ ರೂ ವೆಚ್ಚದಲ್ಲಿ ಕೇಬಲ್, ಪೈಪ್ ಅಳವಡಿಸಿ ವಿದ್ಯುತ್ ದೀಪ ವ್ಯವಸ್ಥೆ ಮಾಡಲಾಗಿದ್ದು ಲೋಕಾರ್ಪಣೆ ಮಾಡಲಾಯಿತು.

