ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ಪ್ರಬುದ್ಧ ಎಂದು ತೋರಿಸಿಕೊಳ್ಳಲು ಹೋಗಿ ಅಪ್ರಬುದ್ಧರಾಗುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಟೀಕಿಸಿದ್ದಾರೆ.
ನಗರದಲ್ಲಿ ಶುಕ್ರವಾರ ವಿಶ್ವನಾಥ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಜನ ನಿಮ್ಮ ತಲೆ ಖಾಲಿಯಾಗಿ ವಿವೇಚನೆ ಇಲ್ಲ ಎಂದುಕೊಳ್ಳುತ್ತಾರೆಂದು ವಿಶ್ವನಾಥ್ ಸಿದ್ದರಾಮಯ್ಯನವರಿಗೆ ಕಿವಿಮಾತು ಹೇಳಿದರು.
ಸಿದ್ದರಾಮಯ್ಯನವರೇ ಆಸ್ಥಾನದ ವಿದೂಷಕನಂತೆ ವರ್ತಿಸಬೇಡಿ. ನೀವು ಒಬ್ಬ ರಾಜಕೀಯ ಮುತ್ಸದ್ದಿಯಂತೆ ವರ್ತನೆ ಮಾಡಿ
ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಾಡು ಮನುಷ್ಯ ಎಂದು ಟ್ವೀಟ್ ಮಾಡಿರುವುದಕ್ಕೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪ್ರತಿಕ್ರಿಯಿಸಿ, ಹೌದು ಹುಲಿಯಾ ಎನ್ನುವುದನ್ನು ನೀವೇ ಒಪ್ಪಿಕೊಂಡಿದ್ದೀರಿ. ಕನಕಪುರ ಬಂಡೆ ಅಂದಾಗ ಡಿ.ಕೆ. ಶಿವಕುಮಾರ್ ಸದನದಲ್ಲಿ ಖುಷಿಪಟ್ಟಿದ್ದಾರೆ. ಇವೆಲ್ಲ ನಿಮ್ಮ ಅಭಿಮಾನಿಗಳು ಕೊಟ್ಟಿರುವ ಬಿರುದುಗಳು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೊಟ್ಟಿರುವ ಬಿರುದುಗಳಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಸಿದ್ಧರಾಮಯ್ಯನವರೇ ನೀವು ಬಳಸಿದ ಭಾಷೆಯನ್ನು ಒಪ್ಪುವಂತಹುದಲ್ಲ. ಅದು ಕಾಡಿನ ಜನರಿಗೆ ನೀವು ಮಾಡಿರುವಂತಹ ಅವಮಾನವಾಗಿದೆ. ಸಿದ್ದರಾಮಯ್ಯನವರಿಗೆ ಏಕವಚನ, ಬಹುವಚನ ಕೂಡ ಗೊತ್ತಿಲ್ಲ. ಆದರೆ, ಅವರು ಬೇರೆಯವರಿಗೆ ಸಂಧೀ ಪಾಠ ಮಾಡುತ್ತಾರೆ ಎಂದು ವಿಶ್ವನಾಥ್ ಟೀಕಿಸಿದರು.
ಸಿದ್ದರಾಮಯ್ಯ ಪ್ರಬುದ್ಧ ಎಂದು ತೋರಿಸಿಕೊಳ್ಳಲು ಹೋಗಿ ಅಪ್ರಬುದ್ಧರಾಗುತ್ತಿದ್ದಾರೆ -ಹೆಚ್.ವಿಶ್ವನಾಥ್

