ನಾನು ಬಂಡೆ ಅಲ್ಲ; ಈ ಸರ್ಕಾರದ ವಿರುದ್ಧ ಜನ ಬೀಸುವ ಕಲ್ಲು -ಡಿ.ಕೆ.ಶಿ

ಬೆಂಗಳೂರು: ನಾನು ಬಂಡೆಯಾಗಲು ಇಚ್ಚಿಸುವುದಿಲ್ಲ. ಜನ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಜನ ಬೀಸುವ ಕಲ್ಲಾಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಪಕ್ಷದ ಅಭ್ಯರ್ಥಿ ಕುಸುಮಾ ಅವರ ಪರವಾಗಿ ನಾನಾ ಸಂಘಟನೆಗಳ ಮುಖಂಡರೊಂದಿಗೆ ಶುಕ್ರವಾರ ಸಭೆ ನಡೆಸಿ ಡಿಕೆಶಿ ಮಾತನಾಡಿದರು
ಕೆಲವರು ಬಂಡೆ ಡೈನಮೇಟ್ ಇಟ್ಟು ಪುಡಿ ಪುಡಿ ಮಾಡುತ್ತೇವೆ ಅಂತಿದ್ದಾರೆ. ಬಂಡೆ ಪುಡಿಯಾಗಿ ಜಲ್ಲಿಕಲ್ಲಾದರೆ ಮನೆಕಟ್ಟಲು, ದೇವರ ಗುಡಿಯ ಮುಂದೆ ಗರಡು ಗಂಭವಾಗಿ ನಿಲ್ಲಲು, ವಿಗ್ರಹವಾಗಿ, ಚಪ್ಪಡಿ ಕಲ್ಲಾಗಿ ಜನರಿಗೆ ಉಪಯೋಗಲು ಸಾಧ್ಯ. ಮಿತಿ ಮೀರಿದರೆ ಈ ಜನ ವಿರೋಧಿ ಸರ್ಕಾರಕ್ಕೆ ಜನ ಬೀಸುವ ಕಲ್ಲಾಗುವೆ. ಹೀಗಾಗಿ ನಾನು ಕೇವಲ ಬಂಡೆಯಾಗಲು ಇಚ್ಚಿಸುವುದಿಲ್ಲ. ಜನರಿಗೆ ನನ್ನಿಂದ ಉಪಯೋಗವಾದರೆ ಸಾಕು ಎಂದು ಡಿಕೆಶಿ ಮಾರ್ಮಿಕವಾಗಿ ಮಾತಾಡಿ ಬಿಜೆಪಿ ವಿರುದ್ಧ ಛಾಟಿ ಬೀಸಿದರು.
ನಾವು ಬೀಜ ಬಿತ್ತುವಾಗ ಅದು ಮರವಾಗಿ ಹಣ್ಣಾದರೂ ನೀಡಲಿ, ನೆರಳಾದರು ನೀಡಲಿ ಎಂಬ ಒಳ್ಳೆ ಭಾವನೆಯಿಂದ ಬಿತ್ತುತ್ತೇವೆ. ಎಲ್ಲ ಬೀಜಗಳು ಹಣ್ಣನೇ ನೀಡಬೇಕು ಎಂದು ಬಯಸುವುದಿಲ್ಲ. ಕೆಲವೊಮ್ಮೆ ಒಬ್ಬರು ಮರ ಬೆಳೆಸುವವರೆ, ಮತ್ತೊಬ್ಬರು ಹಣ್ಣು ತಿನ್ನುತ್ತಾರೆ. ಯಾರೋ ಕಟ್ಟಿದ ಹುತ್ತದಲ್ಲಿ ವಿಷ ಸರ್ಪ ಬಂದು ಸೇರುತ್ತದೆ. ಇದು ಪ್ರಕೃತಿ ನಿಯಮ.
ನಮ್ಮ ರವಿ ಪತ್ನಿ ಕುಸುಮ ನಮ್ಮ ಹೆಣ್ಣು ಮಗಳು ಎಲ್ಲರ ಸಾಕ್ಷಿಯಾಗಿ ತಾಳಿ ಕಟ್ಟಿಸಿಕೊಂಡು, ಸಪ್ತಪದಿ ತುಳಿದು ಮದುವೆಯಾಗಿದ್ದಾಳೆ. ಆದರೆ ನಮ್ಮ ಶೋಭಕ್ಕ ಚುನಾವಣೆ ವೇಳೆ ಗಂಡನ ಹೆಸರು ಬಳಸಿಕೊಳ್ಳಬೇಡ ಅಂತಾರಲ್ಲ ಹೇಗೆ ಸಾಧ್ಯ? ಶೋಭಕ್ಕ ನೀನು, ನಿನ್ನ ಮಗಳೋ, ತಂಗಿನೋ ಆ ಸ್ಥಾನದಲ್ಲಿ ಇದ್ದಿದ್ದರೆ ಏನು ಹೇಳುತ್ತಿದೆ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.