ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕಾರ್ಯ ಪಡೆಯಿಂದ 2 ದಿನದಲ್ಲಿ ಅಂತಿಮ ವರದಿ -ಡಿಸಿಎಂ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗಾಗಿ ರಚನೆ ಮಾಡಲಾಗಿರುವ ಕಾರ್ಯಪಡೆಯು ತನ್ನ ಅಂತಿಮ ಶಿಫಾರಸುಗಳ ಕರಡನ್ನು ಇನ್ನೆರಡು ದಿನಗಳಲ್ಲಿ ಸರಕಾರಕ್ಕೆ ಸಲ್ಲಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ-2020; ವಿಶ್ವಗುರುವಾಗುವತ್ತ ಭಾರತ ಎಂಬ ವಿಷಯದ ಬಗ್ಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ವೆಬಿನಾರ್‍ನಲ್ಲಿ ಬೆಂಗಳೂರಿನಿಂದಲೇ ಪಾಲ್ಗೊಂಡು ಅವರು ಮಾತನಾಡಿದರು. ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ.ರಂಗನಾಥ್ ಅವರ ನೇತೃತ್ವದಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದ್ದು, ಕಾರ್ಯಪಡೆಯು ಅಂತಿಮ ಹಂತದ ಶಿಫಾರಸುಗಳನ್ನು ಶನಿವಾರ ಸಲ್ಲಿಸಲಿದೆ ಎಂದರು.
ಉಳಿದೆಲ್ಲ ರಾಜ್ಯಗಳಿಗಿಂತ ಮೊದಲೇ ಶಿಕ್ಷಣ ನೀತಿಯನ್ನು ಹಂತಹಂತವಾಗಿ ಜಾರಿ ಮಾಡುವುದು ಸರಕಾರದ ಉದ್ದೇಶವಾಗಿದೆ ಎಂದು ಡಿಸಿಎಂ ಹೇಳಿದರು.
ಈವರೆಗೂ ಪಠ್ಯೇತರ ಚಟುವಟಿಕೆಗೂ ಪಠ್ಯಕ್ಕೂ ಸಂಬಂಧವೇ ಇರುತ್ತಿಲ್ಲ. ಪಠ್ಯೇತರ ವಲಯದಲ್ಲಿದ್ದ ಕ್ರೀಡೆ, ಕಲೆ, ಸಂಗೀತ ಮತ್ತಿತರೆ ವಿಷಯಗಳಲ್ಲಿಯೂ ಪಠ್ಯದ ವ್ಯಾಪ್ತಿಗೇ ಬರುತ್ತವೆ. ಆಗ ಜ್ಞಾನಾರ್ಜನೆಯ ದಿಕ್ಕಿನಲ್ಲಿ ವಿದ್ಯಾರ್ಥಿಗಳಿಗೆ ಆಯ್ಕೆ ಹೆಚ್ಚಾಗುತ್ತದೆ. ಅದರಿಂದ ಬಹ ಆಯಾಮದ ಪ್ರತಿಭೆಗಳು ನಮ್ಮ ಶೈಕ್ಷಣಿಕ ವ್ಯವಸ್ಥೆಯಿಂದ ಹೊರಹೊಮ್ಮಲಿವೆ ಎಂದು ಡಿಸಿಎಂ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲ ವಜೂಭಾಯಿ ವಾಲ ಅವರು, ಸಮಾಜಕ್ಕೆ ಒಳ್ಳೆಯದಾಗುವ ಹಾಗೂ ಎಲ್ಲ ಹಂತಗಳಲ್ಲೂ ಜ್ಞಾನವನ್ನು ಹೆಚ್ಚಿಸುವ ಕೆಲಸ ಆಗಬೇಕಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ಗಳಿಸಿದ ಜ್ಞಾನವನ್ನು ಸಮಾಜಕ್ಕೇ ಮೀಸಲಿಡಬೇಕು. ಈ ನಿಟ್ಟಿನಲ್ಲಿ ಬೋಧಕರ ಪಾತ್ರ ಅತಿದೊಡ್ಡದು ಎಂದರು.
ವೆಬಿನಾರ್ ವೇದಿಕೆಯಲ್ಲಿ ಬೆಂಗಳೂರಿನಿಂದಲೇ ಭಾಗಿಯಾಗಿದ್ದ ಶ್ರೀ ರವಿಶಂಕರ್ ಗುರೂಜಿ ಅವರು ಮಾತನಾಡುತ್ತಾ, ತಂತ್ರಜ್ಞಾನ ಮತ್ತು ಆಧ್ಯಾತ್ಮವನ್ನು ಬೇರೆಬೇರೆಯಾಗಿ ನೋಡಬಾರದು. ನಮ್ಮ ಮನಸ್ಸು ಮತ್ತು ದೇಹಕ್ಕೆ ಹೇಗೆ ಅವಿನಾಭಾವ ಸಂಬಂಧ ಇದೆಯೋ ಅದೇ ರೀತಿ ಆಧ್ಯಾತ್ಮಕ್ಕೂ ಟೆಕ್ನಾಲಜಿಗೂ ಸಂಬಂಧ ಇದೆ. ಈ ಹಿನ್ನೆಲೆ ಇವೆರಡೂ ಅಂಶಗಳೂ ಒಟ್ಟಾಗಿ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿ ಸದಸ್ಯ ಪೆÇ್ರ. ಎಂ.ಕೆ. ಶ್ರೀಧರ್, ಎಐಸಿಟಿಇ ಚೇರ್ಮನ್ ಪೆÇ್ರ. ಅನಿಲ್ ಸಹಸ್ರಬುದ್ದೆ, ವಿಟಿಯು ವಿವಿಯ ಉಪ ಕುಲಪತಿ ಪೆÇ್ರ. ಕರಿಸಿದ್ದಪ್ಪ ಮುಂತಾದವರು ಮಾತನಾಡಿದರು.