ಮೈಸೂರು: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆಯೇ ಪರಸ್ಪರ ಉತ್ತಮ ಬಾಂಧವ್ಯ ಇಲ್ಲ ಎಂದು ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ನಗರದಲ್ಲಿ ಸೋಮವಾರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಒಬ್ಬರಿಗೊಬ್ಬರು ಅಧಿಕಾರವನ್ನು ಕಿತ್ತುಕೊಳ್ಳಲು ಬಡಿದಾಡುತ್ತಿದ್ದಾರೆಂದು ಎಸ್.ಟಿ.ಎಸ್ ತಿಳಿಸಿದರು.
ಕಾಂಗ್ರೆಸ್ ನವರು ಮೊದಲು ಅವರ ನಡುವಿನ ಗೊಂದಲ ಬಗೆಹರಿಸಿಕೊಳ್ಳಲಿ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಯತ್ನ ಪಡುತ್ತಿದ್ದರೆ, ಶಿವಕುಮಾರ್ ಅವರನ್ನು ಕೆಳಗಿಳಿಸಲು ಸಿದ್ದರಾಮಯ್ಯ ಪ್ರಯತ್ನ ಪಡುತ್ತಿದ್ದಾರೆ. ಇದನ್ನು ಮುಚ್ಚಿಕೊಳ್ಳಲು ಅವರು ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ಈಗ ನಡೆದಿರುವ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣೆ ಸೇರಿದಂತೆ ನಾಲ್ಕು ವಿಧಾನಪರಿಷತ್ ಸ್ಥಾನಗಳಲ್ಲೂ ಕಾಂಗ್ರೆಸ್ ಸೋಲಬೇಕೆಂಬುದು ಅವರ ಪಕ್ಷಗಳ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣ ಕಾಯುತ್ತಿದೆ. ಕಾರಣ, ಸೋತ ಮೇಲೆ ಪರಸ್ಪರ ಒಬ್ಬರ ಮೇಲೊಬ್ಬರು ಸೋಲಿಗೆ ಕಾರಣೀಭೂತರು ಎಂದು ಆರೋಪಿಸಿ ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ಅವರ ಪಕ್ಷದಲ್ಲಿಯೇ ನಡೆಯುತ್ತಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿಯಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಅವರಿಗೆ ಅವರ ಖುರ್ಚಿಯನ್ನು ಉಳಿಸಿಕೊಂಡರೆ ಸಾಕು. ಹಾಗಾಗಿ ಬಿಜೆಪಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

