ಬೆಂಗಳೂರು: ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿಬೆಳೆಗೆರೆ (62) ನಿಧನರಾಗಿದ್ದಾರೆ.
ಹೃದಯಾಘಾತದಿಂದ ತಡರಾತ್ರಿ ರವಿ ಬೆಳಗೆರೆ ನಿಧನ ಹೊಂದಿದ್ದಾರೆ.
ರಾತ್ರಿ 12 ಗಂಟೆ ಸಮಯದದಲ್ಲಿ ರವಿಬೆಳಗೆರೆ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಅವರನ್ನು ಅಪೆÇೀಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಿಸದೆ ರಾತ್ರಿ ಸುಮಾರು 2.30ರ ವೇಳೆಗೆ ಸಾವನ್ನಪ್ಪಿದ್ದಾರೆ.
ರವಿಬೆಳಗೆರೆ ಅವರ ಪಾರ್ಥಿವ ಶರೀರವನ್ನು ಪ್ರಾರ್ಥನಾ ಶಾಲಾ ಮಂದಿರದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.
ರವಿ ಬೆಳೆಗೆಯವರ ಅಭಿಮಾನಿಗಳು, ಚಲನಚಿತ್ರ ನಟನಟಿಯರು, ಕಿರುತೆರೆ ಕಲಾವಿದರು, ನಿರ್ದೇಶಕರು, ಸಾಹಿತಿಗಳು, ಪತ್ರಕರ್ತರು ಆಗಮಿಸಿ ರವಿ ಬೆಳಗೆರೆ ಅವರ ಅಂತಿಮ ದರ್ಶನ ಪಡೆದರು.
ಬ್ರಾಹ್ಮಣ ಸಂಪ್ರದಾಯದಂತೆ ಸಂಜೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
1995ರಲ್ಲಿ ಹಾಯ್ ಬೆಂಗಳೂರು ಪತ್ರಿಕೆ ಆರಂಭಿಸಿದ ರವಿ, ಯುವ ಜನತೆಗೆ ಓ ಮನಸೇ ತಂದು ಯುವ ಸಮೂಹದ ಮೇಲೆ ಒಂದು ರೀತಿಯ ಪ್ರಭಾವ ಬೀರುವ ಲೇಖನಗಳನ್ನು ಬರೆಯುತ್ತಿದ್ದರು.
50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದ ರವಿ ಬೆಳಗೆರೆ ಟಿವಿ ನಿರೂಪಕರಾಗಿ ಕ್ರೈಂ ಡೈರಿ ಮೂಲಕ ಕಿರುತೆರೆಯಲ್ಲಿ ಭೂಗತ ಲೋಕದ ಜಗತ್ತನ್ನು ಅನಾವರಣಗೊಳಿಸಿದ್ದರು.
ಎಂದೂ ಮರೆಯದ ಹಾಡು ಟಿವಿ ಕಾರ್ಯಕ್ರಮದ ಮೂಲಕ ಜನ ಮನ ಸೆಳೆದಿದ್ದರು ರವಿ.
ಇದರೊಂದಿಗೆ ಚಲನಚಿತ್ರದಲ್ಲಿಯೂ ಅಭಿನಯಿಸಿದ್ದರು ರವಿ ಬೆಳಗೆರೆ.
ಪ್ರಾರ್ಥನಾ ಶಾಲೆ ಆರಂಭಿಸಿ ಸಾವಿರಾರು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದರು.
ರವಿ ಬೆಳೆಗೆರೆ ಅವರಿಗೆ ಎರಡು ಬಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಕೆಂಪೇಗೌಡ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ರವಿ ಬೆಳೆಗೆರೆ ಭಾಜನರಾಗಿದ್ದರು.
ರವಿ ಬೆಳೆಗೆರೆ ಅವರಿಗೆ ಇಬ್ಬರು ಪತ್ನಿಯರು ಹಾಗೂ ನಾಲ್ವರು ಮಕ್ಕಳಿದ್ದಾರೆ. ಮೊದಲ ಪತ್ನಿ ಲಲಿತಾ, ಮಕ್ಕಳಾದ ಕರ್ಣ, ಭಾವನಾ, ಚೇತನ ಹಾಗೂ 2ನೇ ಪತ್ನಿ ಯಶೋಮತಿ ಮತ್ತು ಪುತ್ರ ಹಿಮವಂತ ಅವರನ್ನು ಅಗಲಿದ್ದಾರೆ.
ರವಿಬೆಳೆಗೆರೆ ನಿಧನಕ್ಕೆ ನಾಡಿನ ಗಣ್ಯರು, ಮಾಧ್ಯಮ ಲೋಕದವರು, ರಾಜಕಾರಣಿಗಳು, ಸಿನಿಮಾ ರಂಗದವರು ಗಣ್ಯಾತಿ ಗಣ್ಯರು, ಸಂತಾಪ ಸೂಚಿಸಿದ್ದಾರೆ.

