ಕಾನೂನನ್ನು ಎಲ್ಲರೂ ಗೌರವಿಸಬೇಕು; ನಾನು ಅಖಂಡ ಪರವಾಗಿದ್ದೇನೆ -ಡಿ.ಕೆ.ಶಿ

ಬೆಂಗಳೂರು: ಸಂಪತ್ ರಾಜ್ ಆಗಲಿ ಅಥವಾ ಬೇರೆ ಯಾರೇ ಆಗಲಿ ಎಲ್ಲರೂ ಕಾನೂನನ್ನು ಗೌರವಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಕೆ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಬಂಧನ ಕುರಿತು ನಗರದ ಸದಾಶಿವನಗರ ನಿವಾಸದ ಬಳಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಡಿ.ಕೆ ಶಿವಕುಮಾರ್ ಅವರು ಮಾತನಾಡಿದರು.
ನಾನು ನ್ಯಾಯಬದ್ಧವಾಗಿ, ಕಾನೂನಿನ ಚೌಕಟ್ಟಿನಲ್ಲಿ ನಡೆದುಕೊಳ್ಳುವ ಎಲ್ಲರ ಪರವಾಗಿದ್ದೇನೆ. ನಾನು ಅಖಂಡ ಅವರ ಪರವಾಗಿಲ್ಲ ಎಂದು ಯಾರು ಹೇಳಿದರು? ಈ ಪ್ರಕರಣ ನಡೆದ ಕ್ಷಣದಿಂದಲೂ ಅವರ ಜತೆ ಇದ್ದೇವೆ. ನಾನು ನಮ್ಮ ನಾಯಕರು ಅವರ ಮನೆಗೆ ಹೋಗಿದ್ದೇವೆ. ಅವರ ಜತೆ ಚರ್ಚೆ ಮಾಡಿದ್ದೇವೆ. ಪೆÇಲೀಸರ ವೈಫಲ್ಯ ತೋರಿಸಿದ್ದೇವೆ.
ಅಖಂಡ ಅವರು ನಿಮ್ಮ ಬಳಿ (ಮಾಧ್ಯಮಗಳ) ಮಾತನಾಡುವುದಕ್ಕಿಂತ ನನ್ನ ಬಳಿ ಬಂದು ಮಾತನಾಡಲಿ. ಯಾರದೇ ವೈಯಕ್ತಿಕ ಅಭಿಪ್ರಾಯ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲವೆಂದರು.
ಇದು ಬಿಜೆಪಿಯವರ ಕುತಂತ್ರ. ಕಾಂಗ್ರೆಸ್ ಗೆ ಕೆಟ್ಟ ಹೆಸರು ತರಲು ಈ ಪ್ರಯತ್ನ ಮಾಡುತ್ತಿದೆ. ಸಂಪತ್ ರಾಜ್ ಅವರನ್ನು ಟಾರ್ಗೆಟ್ ಮಾಡುತ್ತಿರುವುದು ನಿಜ. ಇದರಲ್ಲಿ ಮುಚ್ಚಿಡುವುದೇನಿಲ್ಲ. ಅವರ ವಿರುದ್ಧದ ಆರೋಪ ಪಟ್ಟಿ ನೋಡಿದ್ದೇನೆ. ಕಾಂಗ್ರೆಸ್ ಅನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕರಿಗೆ ತೊಂದರೆ ನೀಡಬೇಕು ಅಂತಾ ಈ ರೀತಿ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.