ಬೆಂಗಳೂರು: ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವೆ ತೀವ್ರ ಕಗ್ಗಂಟಾಗಿದ್ದ ಬಿಡದಿ ಸಮೀಪದ ಟಯೋಟ- ಕಿರ್ಲೋಸ್ಕರ್ ಬಿಕ್ಕಟ್ಟು ಕೊನೆಗೂ ಸುಖಾಂತ್ಯಗೊಂಡಿದೆ.
ಇದೇ ವೇಳೆ ಕಂಪನಿಯಲ್ಲಿ ಮುಷ್ಕರ ನಿಷೇಧಿಸಿ, ಲಾಕ್‍ಔಟ್ ತೆರವುಗೊಳಿಸುವಂತೆ ಸೂಚಿಸಲು ಸರಕಾರ ತೀರ್ಮಾನಿಸಿದೆ.
ರಾಜ್ಯದ ಏಕೈಕ ಬೃಹತ್ ಆಟೋಮೊಬೈಲ್ ಕೈಗಾರಿಕೆಯಾಗಿರುವ ಟಯೋಟ- ಕಿರ್ಲೋಸ್ಕರ್ ಕಂಪನಿಯಲ್ಲಿ ಕೆಲ ದಿನಗಳ ಹಿಂದೆ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಉಂಟಾದ ತಿಕ್ಕಾಟದಿಂದ ಸುಮಾರು 39 ಕಾರ್ಮಿಕರನ್ನು ಅಮಾನತು ಮಾಡಲಾಗಿತ್ತು. ಇದರಿಂದ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾದರೆ, ಕಂಪನಿಯೂ ಲಾಕ್‍ಔಟ್ ಘೋಷಣೆ ಮಾಡಿತ್ತು.
ಇದರಿಂದ ಕೂಡಲೇ ಮಧ್ಯಪ್ರವೇಶ ಮಾಡಿದ ರಾಮನಗರ ಜಿಲ್ಲಾ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ, ಕಾರ್ಮಿಕರು ಮತ್ತು ಆಡಳಿತ ಮಂಡಳಿ ಒಳಗೊಂಡಂತೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಮುಂತಾದವರೊಂದಿಗೆ ತುರ್ತು ಸಭೆ ನಡೆಸಿದರಲ್ಲದೆ, ಕಾರ್ಮಿಕ ಕಾಯ್ದೆಯ ಸೆಕ್ಷನ್ 10ರ ಪ್ರಕಾರ ಕಂಪನಿಯಲ್ಲಿ ಲಾಕ್‍ಡೌನ್ ಹಾಗೂ ಮುಷ್ಕರ ಎರಡನ್ನೂ ನಿಷೇಧಿಸುವ ಮಹತ್ವದ ಆದೇಶವನ್ನು ಹೊರಡಿಸಲಾಗುವುದು ಎಂದು ಪ್ರಕಟಿಸಿದರು.
ನಾಳೆ ಬೆಳಗ್ಗೆಯಿಂದಲೇ ಕಂಪನಿಯ ಉತ್ಪಾದನಾ ಚಟುವಟಿಕೆ ಪುನಾರಂಭ ಆಗಬೇಕು. ಕೂಡಲೇ ಕೆಲಸಕ್ಕೆ ಹಾಜರಾಗಿ ಎಂದು ಕಾರ್ಮಿಕರಿಗೆ ಹಾಗೂ ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಆಡಳಿತ ಮಂಡಳಿಗೆ ಡಿಸಿಎಂ ಸೂಚಿಸಿದರು.

