5 ವರ್ಷದಲ್ಲಿ 300 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆಯ ಗುರಿ -ಡಾ.ಅಶ್ವತ್ಥನಾರಾಯಣ

ಬೆಂಗಳೂರು: ಮುಂದಿನ ಐದು ವರ್ಷಗಳಲ್ಲಿ 300 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆಯ ಗುರಿ ಸಾಧಿಸಲಾಗುವುದು ಎಂದು ಐಟಿ-ಬಿಟಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ ನಡೆದ ಬೆಂಗಳೂರು ಟೆಕ್ ಸಮ್ಮಿಟ್ (ಬಿಟಿಎಸ್)-2020ಯಲ್ಲಿ ಪಾಲ್ಗೊಂಡು ಡಿಸಿಎಂ ಅವರು ಮಾನಾಡಿದರು.
ಸದ್ಯಕ್ಕೆ 52 ಶತಕೋಟಿ ಡಾಲರ್‍ವಷ್ಟು ಡಿಜಿಟಲ್ ಆರ್ಥಿಕತೆಯ ಗುರಿಯನ್ನು ರಾಜ್ಯವು ದಾಟಿದೆ. ಮುಂದಿನ ಪಂಚ ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಹಾಕಿಕೊಂಡಿರುವ ಗುರಿಯನ್ನು ಮುಟ್ಟಲು ಎಲ್ಲ ರೀತಿಯ ಕ್ರಮಗಳನ್ನು ಸರಕಾರ ಕೈಗೊಂಡಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಹಾಗೂ ಆತ್ಮನಿರ್ಭರ್ ಭಾರತ್ ಪರಿಕಲ್ಪನೆ ಹಿನ್ನೆಲೆ ಕರ್ನಾಟಕವು ಅಭಿವೃದ್ಧಿಯಲ್ಲಿ ದಾಪುಗಾಲು ಇಡುತಿದೆ ಎಂದವರು ತಿಳಿಸಿದರು.
ಡಿಜಿಟಲ್ ಆರ್ಥಿಕತೆಯ ಗುರಿ ತಲುಪಲು ರಾಜ್ಯವು ಈಗಾಗಲೇ ಡಿಜಿಟಲ್ ಎಕಾನಮಿ ಮಿಷನ್ ಸ್ಥಾಪನೆ ಮಾಡಿ ಕಾರ್ಯಪ್ರವೃತ್ತವಾಗಿದೆ ಎಂದರು.
ರಾಜ್ಯದ ಪ್ರತಿಮೂಲೆಗೂ ಅತ್ಯುತ್ತಮ ಕನೆಕ್ಟಿವಿಟಿ ಮಾಡಿ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಉಪಕ್ರಮಿಸಲಾಗಿದೆ. ಈಗಾಗಲೇ ಲಭ್ಯವಿರುವ 4ಜಿ ಸೇವೆಯ ಜತೆಗೆ, 5ಜಿ ಸೇವೆಯನ್ನೂ ಪ್ರತಿ ಮೂಲೆಗೂ ವಿಸ್ತರಿಸಲಾಗುವುದು ಎಂದು ಹೇಳಿದರು.
ಈ ವೇದಿಕೆಯ ಮೂಲಕ ಇವತ್ತು ಮತ್ತೊಂದು ಪ್ರಮುಖ ಅಧ್ಯಾಯ ಆರಂಭಗೊಳ್ಳುತ್ತಿದೆ. ಸುಮಾರು 5500 ಡ್ರೈವಿಂಗ್ ಟೆಕ್ನಾಲಜಿ ಕಂಪನಿಗಳು ರಾಜ್ಯದಲ್ಲಿದ್ದು, ಅವೆಲ್ಲವೂ ಜಾಗತಿಕ ಮಟ್ಟಕ್ಕೆ ಸರಿಸಾಟಿಯಾಗಿ ಕೆಲಸ ಮಾಡುತ್ತಿವೆ ಎಂದು ಅವರು ತಿಳಿಸಿದರು.
ಕೋವಿಡ್ ಸಮಯದಲ್ಲಿ ತಂತ್ರಜ್ಞಾನ ಬಳಸಿಕೊಂಡು ರಾಜ್ಯ ಸರಕಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಐಟಿ ಬಿಟಿ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಸುಧಾರಣೆ ತರುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ಕೇಂದ್ರ ಐಟಿ ಖಾತೆ ಸಚಿವ ರವಿಶಂಕರ ಪ್ರಸಾದ್ ಮುಂತಾದವರು ಮಾತನಾಡಿದರು.