ಹಾಸನ: ರಾಜ್ಯದಲ್ಲಿ ವಿರೋಧ ಪಕ್ಷ ಎಂಬುದೇ ಇಲ್ಲ ಎಂದು ಕಂದಾಯ ಸಚಿವ ಆರ್ .ಅಶೋಕ್ ಹೇಳಿದರು.
ಚನ್ನರಾಯಪಟ್ಟಣದಲ್ಲಿ ಶನಿವಾರ ಸಚಿವ ಅಶೋಕ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಶುರುವಾಗಿ ಅದು ಒಡೆದ ಮನೆಯಾಗಿದೆ. ಕಾಂಗ್ರೆಸ್ ಪಕ್ಷ ಗೊಂದಲದ ಗೂಡಾಗಿದ್ದು ಡಿ.ಕೆ. ಶಿವಕುಮಾರ್ ಸಿದ್ದರಾಮಯ್ಯ ಪರಮೇಶ್ವರ್ ದಿನೇಶ್ ಗುಂಡೂರಾವ್ ಪಕ್ಷದಲ್ಲಿ ಬಣ ರಾಜಕೀಯ ಮಾಡಿಕೊಂಡು ಹೊಡೆದಾಡುತ್ತಿದ್ದಾರೆಂದರು.
ಈ ನಾಯಕರ ಹೊಡೆದಾಟದಿಂದ ಕರ್ನಾಟಕದಲ್ಲಿ ವಿರೋಧ ಪಕ್ಷವೇ ಇಲ್ಲದಂತಾಗಿದೆ. ಅವರ ಪಕ್ಷದಲ್ಲಿಯೇ ಇಂತಹ ಬೆಳವಣಿಗೆ ನಡೆಯುತ್ತಿದ್ದರೂ ಬಿಜೆಪಿ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆಂದು ಸಚಿವ ಅಶೋಕ್ ದೂರಿದರು.
ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಯಡಿಯೂರಪ್ಪ ಅವರೇ ಮುಂದಿನ ಅವಧಿ ವರೆಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು ಸಿಎಂ ಸ್ಥಾನದ ಬದಲಾವಣೆ ಇಲ್ಲ ಎಂದರು.
ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ವಿಷಯವಾಗಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿ, ಸಂತೋಷ್ ಚಿಕಿತ್ಸೆಯಲ್ಲಿದ್ದು ಪೂರ್ಣಪ್ರಜ್ಞೆ ಬಂದ ನಂತರ ಹೇಳಿಕೆಯ ಆಧಾರದ ಮೇಲೆ ಪ್ರತಿಕ್ರಿಯೆ ನೀಡಲು ಸಾಧ್ಯ ಎಂದರು. ವಿಡಿಯೋ ವಿಷಯವಾಗಿ ಸಂತೋಷ್ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿರುವುದು ಸುಳ್ಳಿನ ಆಪಾದನೆ. ಕಪೆÇೀಲಕಲ್ಪಿತ ಹೇಳಿಕೆ ನೀಡುವುದರಲ್ಲಿ ಡಿಕೆಶಿ ನಿಸ್ಸೀಮರು ಎಂದು ಅಶೋಕ್ ಟೀಕಿಸಿದರು.
ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎಲ್ಲಾ ಪಂಚಾಯಿತಿಯಲ್ಲೂ ಬಿಜೆಪಿ ಬಾವುಟ ಹಾರಲಿದೆ. ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಪಂಚಾಯಿತಿ ಮಟ್ಟದಲ್ಲಿ ಪ್ರತಿಗ್ರಾಮದಲ್ಲಿ ಪಕ್ಷ ಬಲವರ್ಧನೆಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನಿರ್ದೇಶನದಂತೆ 6 ತಂಡವನ್ನು ರಚಿಸಿಕೊಂಡು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಪಿಂಚಣಿ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಪಿಂಚಿಣಿ ಹಣವನ್ನು ನೇರವಾಗಿ ಆರ್ ಟಿಜಿಎಸ್ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ವಿರೋಧ ಪಕ್ಷವೇ ಇಲ್ಲ -ಸಚಿವ ಅಶೋಕ್

