ಎಮೋಷನಲ್ ಟ್ರ್ಯಾಪ್‍ಗೆ ನಾವು ಬಲಿಯಾದೆವು -ಹೆಚ್. ಡಿ. ಕುಮಾರಸ್ವಾಮಿ

ಮೈಸೂರು: ಎಮೋಷನಲ್ ಟ್ರ್ಯಾಪ್‍ಗೆ ನಾವು ಬಲಿಯಾದೆವು ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಶನಿವಾರ ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಕಾಂಗ್ರೆಸ್ ಜೊತೆ ಕೈ ಜೋಡಿಸಿದ ಕಾರಣ ನಮ್ಮ ಶಕ್ತಿ ಕುಂದಿತು. ಸಿದ್ದರಾಮಯ್ಯ ಅಪಪ್ರಚಾರ ಮಾಡಿದರು. ಪ್ರೀ ಪ್ಲ್ಯಾನ್ ಮಾಡಿ ಸಿದ್ದರಾಮಯ್ಯ ಅಂಡ್ ಟೀಂ ನನ್ನ ಹೆಸರು ಹಾಳು ಮಾಡಿದರು ಎಂದು ಕುಮಾರಸ್ವಾಮಿ ತಿಳಿಸಿದರು.
ನಾನು ಹಿಂದೆ ಸಿಎಂ ಆಗಿದ್ದಾಗ ಬಂದ ಒಳ್ಳೆಯ ಹೆಸರು ಇತ್ತು. ಆದರೆ ಪ್ರೀ ಪ್ಲ್ಯಾನ್ ಮಾಡಿ ಸಿದ್ದರಾಮಯ್ಯ ಅಂಡ್ ಟೀಂ ನನ್ನ ಹೆಸರು ಹಾಳು ಮಾಡಿದರು. ಕಾಂಗ್ರೆಸ್‍ನಿಂದಲೇ ಎಲ್ಲವೂ ಸರ್ವನಾಶವಾಯಿತು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಬಿಜೆಪಿ ಜೊತೆ ಸಂಬಂಧ ಇಟ್ಟುಕೊಳ್ಳುವ ಹಾಗಿದ್ದರೆ ಇವತ್ತು ಈ ರಾಜ್ಯದಲ್ಲಿ ನಾನೇ ಸಿಎಂ ಆಗಿರುತ್ತಿದೆ. ಕಾಂಗ್ರೆಸ್ ಸಹವಾಸ ಮಾಡಿ 12 ವರ್ಷ ಸಂಪಾದನೆ ಮಾಡಿದ್ದ ಗೌರವ ಹಾಳುಮಾಡಿಕೊಂಡೆ. ದೇವೇಗೌಡರ ಮಾತಿಗೆ ಗೌರವ ಕೊಟ್ಟು ಕಾಂಗ್ರೆಸ್ ಜೊತೆ ಹೋದೆ ಎಂದರು.
ನಾನ್ಯಾಕೆ ಒಂದೆ ತಿಂಗಳಲ್ಲಿ ಕಣ್ಣಿರು ಹಾಕಿದೆ ಗೊತ್ತಾ? ಎಂದ ಹೆಚ್ ಡಿಕೆ, ಅವರು ಮಾಡುತ್ತಿದ್ದ ಎಲ್ಲವು ನನಗೆ ಗೊತ್ತಾಗಿ ಕಣ್ಣೀರು ಹಾಕಿದೆ. ಬಿಜೆಪಿಯವರು ನನಗೆ ಆ ಮಟ್ಟಿಗೆ ದ್ರೋಹ ಮಾಡಿರಲಿಲ್ಲ. ಆದರೂ ಕಾಂಗ್ರೆಸ್ ಎಂಎಲ್‍ಎಗಳಿಗೆ 19 ಸಾವಿರ ಕೋಟಿ ಅನುದಾನ ಕೊಟ್ಟಿದ್ದೆ. ಅವರು ಮಾತ್ರ ನನಗೆ ಸಹಕಾರ ನೀಡಲಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ರೆ ನಮಗೆ ಏನು ಸಿಗುತ್ತೆ. ಯಡಿಯೂರಪ್ಪ 6 ತಿಂಗಳು ಸಿಎಂ ಆಗಿದ್ದುಕೊಂಡು ವಾಪಸ್ಸು ಹೋಗ್ತಾರೆ. ಮತ್ತೆ ನಾನೇ ಸಿಎಂ ಆಗುತ್ತೇನೆ ಅಂತ ಕನಸು ಕಂಡಿದ್ದವರು ಈ ಸಿದ್ದರಾಮಯ್ಯ ಎಂದು ಕುಮಾರಸ್ವಾಮಿ ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿಗೆ 105 ಸ್ಥಾನ ಬರಲು ಸಿದ್ದರಾಮಯ್ಯ ಕಾರಣ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಸಿದ್ದರಾಮಯ್ಯ ಯಾರನ್ನು ಯಾವಾಗ ಭೇಟಿ ಮಾಡುತ್ತಾರೆ ಎಂಬುದು ನನಗೆ ಗೊತ್ತು. ಮೊನ್ನೆಯೂ ಅವರು ಯಾರನ್ನು ಎಲ್ಲಿ ಭೇಟಿ ಮಾಡಿದ್ದಾರೆ ಎನ್ನುವುದು ನನಗೆ ತಿಳಿದಿದೆ. ನಾನು ಸಿಎಂ ಅವರನ್ನು ಭೇಟಿ ಮಾಡಿದರೂ ಕದ್ದು ಮುಚ್ಚಿ ಭೇಟಿ ಮಾಡುವುದಿಲ್ಲ ಎಂದರು ಹೆಚ್.ಡಿ.ಕೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಸೋಲು ಗೆಲವು ಜೆಡಿಎಸ್ ಮೇಲೆ ನಿಂತಿದೆ ಎಂದು ಅವರಿಗೆ ಗೊತ್ತಾಗಿದೆ. ಸಿದ್ದರಾಮಯ್ಯ ಅವರಿಂದ ಕಳೆದ ಬಾರಿ ಬಿಜೆಪಿಗೆ 105 ಸ್ಥಾನ ಬಂತು ಎಂದರು.