ಬೆಂಗಳೂರು: ದೇಶದ ಅನ್ನದಾತ ಹೋರಾಟಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ರಾಷ್ಟ್ರಮಟ್ಟದಿಂದ, ತಾಲೂಕು ಹಾಗೂ ಬ್ಲಾಕ್ ಮಟ್ಟದವರೆಗೂ ರೈತರು ಕರೆ ನೀಡಿರುವ ಬಂದ್ ಗೆ ನಾವು ಕೈಜೋಡಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ವಿಧಾನಸೌಧದದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಡಿ.ಕೆ ಶಿವಕುಮಾರ್ ಮಾತನಾಡಿದರು.
ಭೂಸುಧಾರಣ ಕಾಯ್ದೆ, ಎಪಿಎಂಸಿ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಗಳು ಅನ್ನದಾತರ ವಿರುದ್ಧವಾಗಿದ್ದು, ಇದನ್ನು ನಾವು ವಿರೋಧಿಸುತ್ತೇವೆ. ನಾಳೆ ರೈತರು ಈ ದೇಶದಲ್ಲಿ ಬಂದ್ ಕರೆ ನೀಡಿದ್ದು, ಇದಕ್ಕೆ ಇಡೀ ರಾಷ್ಟ್ರದ್ಯಂತ ಪ್ರತಿ ತಾಲೂಕು, ಬ್ಲಾಕ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಬೆಂಬಲ ನೀಡಲಿದೆ ಎಂದು ಡಿಕೆಶಿ ಹೇಳಿದರು.
ನಾವು ನಾಳೆ (ಡಿ. 8) ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡುತ್ತೇವೆ. ಶಾಂತಿಯುತವಾಗಿ ಯಾರಿಗೂ ಅಡಚಣೆ ಮಾಡದೇ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವಾಗದಂತೆ ರೈತರ ಪರವಾಗಿ ಹೊರಾಟ ಮಾಡುತ್ತೇವೆಂದರು.
ಗೋಹತ್ಯೆ ಮಸೂದೆ ತರುವ ಅಗತ್ಯ ಇಲ್ಲ. ಅವರು ಒಂದು ವರ್ಗವನ್ನು ಗುರಿಯಾಗಿಟ್ಟುಕೊಂಡು ಈ ಮಸೂದೆ ತರುತ್ತಿದ್ದಾರೆ. ಅವರು ಯಾವ ರೀತಿ ಮಸೂದೆ ತರುತ್ತಾರೆ ನೋಡೋಣ. ಆ ಮೇಲೆ ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಡಿಕೆ ಶಿವಕುಮಾರ್ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ರೈತರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ -ಡಿ.ಕೆ ಶಿವಕುಮಾರ್

