ಬೆಂಗಳೂರು: ಕರ್ನಾಟಕ ಗೋಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣೆ ವಿಧೇಯಕ 2020ಕ್ಕೆ ಬುಧವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆತ ಹಿನ್ನೆಲೆಯಲ್ಲಿ ಗುರುವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಗೋ ಪೂಜೆಯನ್ನು ನೆರವೇರಿಸಲಾಗಿದ್ದು, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಅವರು ಗೋ ಪೂಜೆ ಮಾಡುವ ಮೂಲಕ ವಿಧೇಯಕವನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಆಯಾ ಜಿಲ್ಲೆಗಳ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಪಕ್ಷದ ಕಚೇರಿಗಳಲ್ಲಿ ಗೋಪೂಜೆಗಳನ್ನು ಇಂದು ರಾಜ್ಯಾದ್ಯಂತ ನೆರವೇರಿಸುತ್ತಿದ್ದಾರೆ. ಇದೊಂದು ಐತಿಹಾಸಿಕ ನಿರ್ಣಯವಾಗಿದೆ ಎಂದು ತಿಳಿಸಿದರು.
ಈ ವಿಧೇಯಕಕ್ಕೆ ಕಾಂಗ್ರೆಸ್ ನವರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಂಗ್ರೆಸ್ ನವರದ್ದು ವಿರೋಧ ಮಾಡುವುದೇ ಕೆಲಸ. ಅವರು ವಿರೋಧ ಪಕ್ಷವಾಗಿರುವುದರಿಂದ ಪ್ರತಿ ಒಳ್ಳೆಯ ಕೆಲಸಕ್ಕೂ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು.

