ಚಿಕ್ಕಬಳ್ಳಾಪುರ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಹಿತರಕ್ಷಣೆಗೆ ಕೈಗೊಂಡಿರುವ ತೀರ್ಮಾನಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಪ್ರತಿಪಕ್ಷಗಳಿಗೆ ಸವಾಲು ಹಾಕಿದ್ದಾರೆ.
ತಾಲ್ಲೂಕು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ 77ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಶನಿವಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಕೃಷಿ ಮಸೂದೆಗಳಿಂದ ಆಗಿರುವ ತೊಂದರೆ ಏನು ಎಂದು ಇತ್ತಿಚೆಗೆ ವಿರೋಧಿಸುವವರು ಯಾರೂ ಹೇಳ್ತಿಲ್ಲ. ರೈತರು ಅವರ ಬೆಳೆಗಳನ್ನು ತಮಗೆ ಬೇಕಾದ ಕಡೆ ಮಾರಾಟ ಮಾಡಲು ಅವಕಾಶಮಾಡಿ ಕೊಟ್ಟರೆ ತಪ್ಪೇನು ? ಕೆಲವರು ರಾಜಕಾರಣ ಮಾಡಲು ಜನಪರ ಧೋರಣೆಯನ್ನು ತಪ್ಪಾಗಿ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಹೋರಾಟಗಳಿಗೆ ರೈತರು ಬೆಂಬಲ ನೀಡ್ತಿಲ್ಲ. ಕೆಲ ಸಂಘಟನೆಗಳು ಆಮಿಷಕ್ಕೆ ಒಳಗಾಗಿ ಪ್ರತಿಭಟನೆ ಮಾಡುತ್ತಿವೆ. ಭೂಸುಧಾರಣಾ ಕಾಯ್ದೆ ವಿರುದ್ಧದ ಪ್ರತಿಭಟನೆ ಹಿಂದೆ ಕೂಡ ಇದೇ ಉದ್ದೇಶ ಅಡಗಿದೆ ಎಂದರು.
ಪ್ರಧಾನಿ ನರೇಂದ್ರಮೋದಿ ಅವರು ಎಂದಿಗೂ ರೈತ ವಿರೋಧಿ ಕಾನೂನನ್ನು ಜಾರಿ ಮಾಡುವುದಿಲ್ಲ. ರೈತರು ಪ್ರತಿಪಕ್ಷಗಳ ದಾರಿತಪ್ಪಿಸುವ ಯತ್ನಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ತಾಲ್ಲೂಕಿನಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಹೆಚ್ಚು. ಅವರಿಗೆ ವಾಣಿಜ್ಯ ಬೆಳೆ ಬೆಳೆಯಲು ಪೆÇ್ರೀತ್ಸಾಹ ನೀಡಬೇಕಿದೆ. ಪ್ರಗತಿಪರ ರೈತರು ನಮ್ಮಲ್ಲಿದ್ದಾರೆ, ಅವರಿಗೆ ಬ್ಯಾಂಕು ಬೆನ್ನೆಲುಬು ಆಗಬೇಕಿದೆ ಎಂದು ಹೇಳಿದರು.
ಕೆಲವೇ ವರ್ಷಗಳಲ್ಲಿ ಎತ್ತಿನಹೊಳೆ ನೀರನ್ನು ತಂದು ತಾಲ್ಲೂಕಿನ ಕೆರೆಗಳನ್ನು ತುಂಬಿಸಲಿದ್ದೇನೆ. ಹೆಚ್ಚಿನ ಹಣಕ್ಕೆ ಸಂಪುಟ ಸಭೆಯಲ್ಲಿ ಆಗ್ರಹಿಸಿದ್ದೇನೆ ಎಂದು ತಿಳಿಸಿದರು.

