ಮೈಸೂರು: ನಾಗರಿಕರ ಸ್ವಂತ ಮನೆ ಕನಸು ನನಸಾಗಿಸುವ ನಗರಾಭಿವೃದ್ಧಿ ಪ್ರಾಧಿಕಾರ ನಮ್ಮ ಮನೆ – ನಮ್ಮ ಲೈಸನ್ಸ್ ಎಂಬ ನೂತನ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಈ ವಿಧ್ಯುಕ್ತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಕರ್ನಾಟಕದ ಎಲ್ಲೂ ಸಹ ಈ ಪದ್ಧತಿ ಇಲ್ಲ. ನಮ್ಮ ಮನೆ – ನಮ್ಮ ಲೈಸನ್ಸ್ ಯೋಜನೆ ಎಲ್ಲರಿಗೂ ಮಾದರಿಯಾಗಿದೆ. ಬೆಂಗಳೂರಿನಲ್ಲಿ ಬಿಡಿಎ ಸಹಿತ ಇಂಥ ಒಂದು ವ್ಯವಸ್ಥೆಯನ್ನು ಜಾರಿಗೆ ತಂದಿಲ್ಲ ಎಂದರು.
ಯಾರಿಗಾದರೂ ಮನೆ ಬೇಕಾದರೆ ಎಲ್ಲೂ ಅಲೆಯ ಬೇಕಿಲ್ಲ. ಎಲ್ಲ ದಾಖಲಾತಿಗಳು ಸರಿ ಇದ್ದರೆ ಒಂದೇ ಕಡೆ, ಒಂದೇ ದಿನದಲ್ಲಿ ಅನುಮತಿ ದೊರೆಯುತ್ತಿದೆ. ಇದರಿಂದ ಮಾನಸಿಕ ಹಾಗೂ ದೈಹಿಕ ತೊಂದರೆಗಳು ತಪ್ಪುತ್ತದೆ. ತೆರಿಗೆ ಸೇರಿದಂತೆ ಇನ್ನಿತರ ಕ್ರಮಗಳನ್ನು ಯಾವುದೇ ಸಮಸ್ಯೆ ಇಲ್ಲದೆಪಾವತಿಸಲು ಈ ತೀರ್ಮಾನ ತೆಗೆದುಕೊಂಡಿರುವ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಲ್ಲಾಳಿ ಮುಕ್ತ ಮುಡಾ ಮಾಡಲು ಚಿಂತನೆ ಇದ್ದು, ಮುಡಾದಲ್ಲಿ ಟಾಸ್ಕ್ ಫೋರ್ಸ್ ನಿರ್ಮಾಣವನ್ನು ಶೀಘ್ರದಲ್ಲಿ ಮಾಡಲಾಗುವುದು. ಅಧಿಕಾರಿಗಳು ಮಧ್ಯವರ್ತಿಗಳೊಂದಿಗೆ ಕೈಜೋಡಿಸಿ ಅವರಲ್ಲಿಗೆ ಹೋಗುವಂತೆ ಸಾರ್ವಜನಿಕರಿಗೆ ಹೇಳಿದರೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಮುಡಾದಿಂದ ನಿವೇಶನ ಹಾಗೂ ವಸತಿ ಸಮುಚ್ಛಯ ಇಲ್ಲವೇ ಟೌನ್ ಶಿಪ್ ನಿರ್ಮಾಣದಂತಹ ಕೆಲಸ ಗಳನ್ನು ಪರಿಶೀಲನೆ ಮಾಡಲು ಮುಡಾ ನಿಯೋಗ ಬೆಂಗಳೂರಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ನಿನ್ನೆಯಷ್ಟೇ ಸ್ಥಳ ಪರಿಶೀಲನೆ ನಡೆಸಿದೆ. ಮೈಸೂರಿಗೆ ಹಾಗೂ ಇಲ್ಲಿನ ಜನತೆಗೆ ಹೊಂದಿಕೆಯಾಗುವಂತೆ ಯೋಜನೆ ಇರಲಿದೆ ಎಂದು ಸಚಿವರು ತಿಳಿಸಿದರು.
ನಂಜನಗೂಡಿನ ಹುಳಿಮಾವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಮ್ಮಾವು ಗ್ರಾಮದವರು ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ ಮಾಡಿರುವ ಕ್ರಮ ಸರಿಯಲ್ಲ ಎಂದರು.

