ಬೆಂಗಳೂರು: ರಾಜ್ಯದ ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನಲೆಯಲ್ಲಿ ಮತದಾರ ಇಂದು ಮತಪೆಟ್ಟಿಗೆಯಲ್ಲಿ ಭದ್ರ ಪಡಿಸುವ ಮತಗಳು 43,238 ಸ್ಥಾನಗಳಿಗೆ ಸ್ಪರ್ಧಿಸಿದವರ ಭವಿಷ್ಯವನ್ನು ನಿರ್ಧರಿಸಲಿದೆ.
ಗಾಮ ಪಂಚಾಯ್ತಿಗಳು ಅಧಿಕಾರ ವಿಕೇಂದ್ರಿಕರಣದ ಪ್ರಥಮ ಘಟ್ಟವಾಗಿರುವುದರಿಂದ ಇದು ಹೆಚ್ಚಿನ ಮಹತ್ವ ಪಡೆದಿವೆ. ಹಾಗಾಗಿ ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಭವಿಷ್ಯ ಅರಸುತ್ತಿರುವವರು ಸಹ ಹಳ್ಳಿಗಾಡಿನ ಸಾಮಾನ್ಯರಷ್ಟೆ ಅಲ್ಲದೆ ಪದವಿ ಮತ್ತಿತರ ಉನ್ನತ ವಿದ್ಯಾಭ್ಯಾಸ ಮಾಡಿದವರು ಇಂದಿನ ಚುನಾವಣೆಯಲ್ಲಿ ಹಲವು ಆಶಯಗಳೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಹಲವು ವಿಶಿಷ್ಟ ಅರ್ಭರ್ಥಿಗಳು ನಾಮ ಪತ್ರ ಸಲ್ಲಿಸಿ ಚುನಾವಣೆಯಲ್ಲಿ ತಮ್ಮ ಗೆಲುವಿನ ಕನಸೊತ್ತು ನಿಂತಿರುವುದು ಈ ಹಳ್ಳಿ ಫೈಟ್‍ಗೆ ಕಳೆ ತಂದಿದೆ.
ಉದ್ಯೋಗ ಅರಸಿ ಪಟ್ಟಣದತ್ತ ಮುಖಮಾಡುವ ವಿದ್ಯಾವಂತರು ಅದಕ್ಕೆ ಬದಲಾಗಿ ತಾವೆ ಹುಟ್ಟಿ ಬೆಳೆದ ಗ್ರಾಮಗಳ ಅಭಿವೃದ್ದಿಯ ಕನಸೊತ್ತು ಈ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಉತ್ತಮ ಬೆಳವಣಿಗೆಯೂ ಹೌದು. ಗ್ರಾಮೀಣ ಜನರ ಸಮಸ್ಯೆಗಳನ್ನು ನಿವಾರಿಸಲು ಅಧಿಕಾರದ ಮೂಲ ಸ್ಥಾನವಾದ ಗ್ರಾಮ ಪಂಚಾಯ್ತಿಗೆ ವಿದ್ಯಾವಂತರು ಅಡಿ ಇಡುವುದು ಅಭಿವೃದ್ದಿಗೆ ಒಂದು ದಿಕ್ಸೂಚಿ ದೊರಕಿದಂತೆಯೇ ಸರಿ.
ಇಂತಹ ಬೆಳವಣಿಗೆ ರಾಜ್ಯದ ಹಲವು ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿರುವುದು ನಿಜಕ್ಕೂ ಗ್ರಾಮೀಣ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿಸಿದೆ ಎಂದರೂ ಅತಿಶಯೋಕ್ತಿ ಆಗಲಾರದು.
ಮಳವಳ್ಳಿ ತಾಲೂಕಿನ ಡಿ.ಹಲಸಹಳ್ಳಿ ಗ್ರಾಪಂಗೆ ಸ್ನಾತಕೊತ್ತರ ಪದವೀದರರಾದ (ಎಂಎಸ್ಸಿ) ಎಚ್.ಸಿ.ಸತೀಶ್, ಅಂತರವಳ್ಳಿ ಗ್ರಾಮದ 2ನೇ ಬ್ಲಾಕ್‍ಗೆ ಎಂಎ ಪದವೀಧರರಾದ ಎ.ಸಿ.ಸತೀಶ್ ಕಣದಲ್ಲಿದ್ದಾರೆ.
ದಾಬಸ್‍ಪೇಟೆಯಲ್ಲಿ ಈ ಬಾರಿ ಹೆಚ್ಚು ಯುವಕರೇ ಚುನಾವಣೆ ಎದುರಿಸುತ್ತಿದ್ದು, ವಯಸ್ಸಾದವರು ಸ್ಪರ್ಧೆಯಿಂದ ದೂರವೇ ಉಳಿದಿರುವುದು ಅಚ್ಚರಿ ಮೂಡಿಸಿದೆ.
ಹೊನ್ನೇನಹಳ್ಳಿ ಸಾಮಾನ್ಯ ಕ್ಷೇತ್ರದಿಂದ ಡಿಪ್ಲಮೋ ಪದವೀದರ ಹೆಚ್. ಕೆ. ರವೀಶ್, ಸೋಂಪುರ ಪಂಚಾಯ್ತಿಯ ವಾರ್ಡ್ ಒಂದರಿಂದ ಎಂಬಿಎ ಪಧವೀಧರ ಬಿ.ಜೆ. ರಿಶ್ವಂತ್ ಸ್ಪರ್ಧಿಸಿದ್ದಾರೆ.
ಶಿರಸಿಯ ಕಾನಗೋಡು ಗ್ರಾಮ ಪಂಚಾಯ್ತಿಯ ಬಿಸಲ ಕೊಪ್ಪ ವಾರ್ಡನಲ್ಲಿ ರಾಘವೇಂದ್ರ ನಾಯ್ಕ ಎಂಬ ಅಂಧವ್ಯಕ್ತಿಯೊಬ್ಬರು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಅಂಗವೈಕಲ್ಯ ದೌರ್ಬಲ್ಯವಲ್ಲ ಎಂಬುದನ್ನು ಸಾಬೀತುಪಡಿಸಲು ಕಣಕ್ಕಿಳಿದಿರುವುದಾಗಿ ಹೇಳಿದ್ದಾರೆ. ಆದರೆ ನಂಜನಗೂಡಿನ ಬೊಕ್ಕಹಳ್ಳಿ ಗ್ರಾಮದಲ್ಲಿ ಬಿಕ್ಷುಕನೊಬ್ಬರನ್ನು ಚುನಾವಣೆಗೆ ಇಲ್ಲಿನ ಯುವಕರು ನಿಲ್ಲಿಸಿದ್ದು, ತಮ್ಮ ಗ್ರಾಮದಲ್ಲಿ ನೆನೆಗುದಿಗೆ ಬಿದ್ದಿರುವ ಅಭಿವೃದ್ದಿ ಕಾರ್ಯಗಳನ್ನು ಲೆಕ್ಕಿಸದ ಗ್ರಾಪಂ ಚುನಾಯಿತರ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿರುವ ಈ ಯುವಕರು ಸಿಂಹಾದ್ರಿ ಚಿತ್ರದಿಂದ ಪ್ರೇರಿತರಾಗಿ ಈ ರೀತಿ ಬಿಕ್ಷುಕನನ್ನುನಿಲ್ಲಿಸಿರುವುದಾಗಿ ಹೇಳಿದ್ದಾರೆ.

