ಡಾ.ಗುರುಪ್ರಸಾದ ಎಚ್ ಎಸ್
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಶುಕ್ರವಾರವಾದ ಇಂದು (25-12-20) ದೇಶದಾದ್ಯಂತ ವೈಕುಂಠ ಏಕಾದಶಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ ಇದರ ನಿಮಿತ್ತ ಈ ಲೇಖನ.
ನಮ್ಮ ಹಿಂದೂ ಧರ್ಮದಲ್ಲಿ ಆಚರಣೆ ಮತ್ತು ಸಂಪ್ರದಾಯಗಳು ಅತಿ ಮಹತ್ವದ್ದು ಎಂದೆನಿಸಿದ್ದು, ಅದು ವೇಷಭೂಷಣಗಳು, ಅನುಸರಿಸುವ ರೀತಿ ರಿವಾಜುಗಳು ಸಂಪ್ರದಾಯಗಳು ತಮ್ಮದೇ ಆದ ವಿಶೇಷತೆ ಮತ್ತು ಮಹತ್ವಗಳನ್ನು ಪಡೆದುಕೊಂಡಿದೆ. ಇನ್ನು ಹಬ್ಬಗಳ ವಿಷಯಕ್ಕೆ ಬಂದಾಗ ಅವುಗಳನ್ನು ಆಚರಿಸುವ ಪದ್ಧತಿ ಕೂಡ ಪ್ರತ್ಯೇಕವಾಗಿರುತ್ತದೆ ಮತ್ತು ಒಂದೊಂದು ಐತಿಹಾಸಿಕ ರಹಸ್ಯಗಳನ್ನು ಇವುಗಳು ಒಳಗೊಂಡಿರುತ್ತವೆ.
ಹಾಗೆಯೇ ವೈಕುಂಠ ಏಕಾದಶಿಯನ್ನು ಶ್ರದ್ಧ ಭಕ್ತಿಯಿಂದ ಆಚರಿಸುತ್ತಾರೆ.
ಈ ಏಕಾದಶಿಯನ್ನು ಶುಕ್ಲ ಪಕ್ಷದ ಧರ್ನುಮಾಸದಂದು ಆಚರಿಸಲಾಗುತ್ತದೆ.
ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ ಈ ದಿನದಂದು ಉಪವಾಸವನ್ನು ಕೈಗೊಳ್ಳುವವರು ತಿಂಗಳುಗಳಲ್ಲಿ ಬರುವ 23 ಏಕಾದಶಿ ಉಪವಾಸವನ್ನು ಕೈಗೊಂಡಂತೆ ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ.
ವೈಕುಂಠ ಏಕಾದಶಿ ಇದರಲ್ಲಿ ಎರಡು ಪದಗಳು ಸೇರಿಕೊಂಡಿವೆ. ಒಂದು ವೈಕುಂಠ, ಎರಡನೆಯದು ಏಕಾದಶಿ, ಮೊದಲು ಇವುಗಳ ಸ್ಥೂಲ ಅರ್ಥ. ವೈಕುಂಠ ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂಬ ಹೆಸರಿದೆ. ಕಾರಣ ಒಂದು ಮನ್ವಂತರದಲ್ಲಿ ವಿಷ್ಣುವು ವಿಕುಂಠೆಯೆಂಬ ಸ್ತ್ರೀಯಲ್ಲಿ ಅವತರಿಸಿದನು. ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂತು ಎಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ.
ವೈಕುಂಠ ಏಕಾದಶಿ: ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ.
ಸೂರ್ಯನು ಧನುಸ್ಸುನಲ್ಲಿ ಪ್ರವೇಶಿಸಿದ ಅನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮಧ್ಯೆ ಮುಕ್ಕೋಟಿ ಏಕಾದಶಿ ಬರುತ್ತದೆ.
ಈ ದಿನ ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ವೈಷ್ಣವ ಆಲಯಗಳಲ್ಲಿ ಉತ್ತರ ದ್ವಾರದ ಬಳಿ ಮುಂಜಾನೆ ಭಗವಂತನ ದರ್ಶನಕ್ಕಾಗಿ ಕಾದಿರುತ್ತಾರೆ.
ಈ ದಿನ ಮಹಾವಿಷ್ಣು ಗರುಡ ವಾಹನದ ಮೇಲೆ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕಕ್ಕೆ ಇಳಿದುಬಂದು ಭಕ್ತರಿಗೆ ದರ್ಶನ ನೀಡುತ್ತಾನೆ. ಆದಕಾರಣ ಇದಕ್ಕೆ ಮುಕ್ಕೋಟಿ ಏಕಾದಶಿ ಎಂಬ ಹೆಸರು ಬಂದಿದೆ.
ಈ ಒಂದು ಏಕಾದಶಿ ಮೂರು ಕೋಟಿ ಏಕಾದಶಿಗಳಿಗೆ ಸಮವಾದ ಪವಿತ್ರತೆಯನ್ನು ಹೊಂದಿರುವ ಕಾರಣ ಇದನ್ನು ಮುಕ್ಕೋಟಿ ಏಕಾದಶಿ ಎನ್ನುತ್ತಾರೆ.
ಮುಕ್ಕೋಟಿ ಏಕಾದಶಿ ದಿನ ಹಾಲಾಹಲ, ಅಮೃತ ಎರಡೂ ಹುಟ್ಟಿದವು. ಈ ದಿನವೇ ಶಿವನು ಹಾಲಾಹಲ ನುಂಗಿದ. ಮಹಾಭಾರತ ಯುದ್ಧದಲ್ಲಿ ಭಗವದ್ಗೀತೆಯನ್ನು ಕೃಷ್ಣನು ಅರ್ಜುನನಿಗೆ ಇದೇ ದಿನ ಉಪದೇಶಿಸಿದ ಎಂಬ ನಂಬಿಕೆ ಇದೆ.
ಏಕಾದಶಿ ಉಪವಾಸದ ವಿಶೇಷತೆ ಮಹತ್ವ: ಪದ್ಮ ಪುರಾಣದಲ್ಲಿ ಏಕಾದಶಿಯ ಮಹತ್ವವನ್ನು ತಿಳಿಸಲಾಗಿದೆ. ಭಗವಾನ್ ವಿಷ್ಣುವು ಸ್ತ್ರೀ ಶಕ್ತಿ ಏಕಾದಶಿಯ ರೂಪವನ್ನು ಹೊಂದಿ ಈ ದಿನ ಮುರಾನ್ ಎಂಬ ಅಸುರನನ್ನು ವಧಿಸಿದ್ದರು ಎಂದು ಹೇಳಲಾಗಿದೆ. ಏಕಾದಶಿಯಿಂದ ಸಂಪ್ರೀತಗೊಂಡ ದೇವರು ಈ ದಿನ ಉಪವಾಸವನ್ನು ಕೈಗೊಳ್ಳುವವರು. ಮರಣದ ನಂತರ ವೈಕುಂಠವನ್ನು ತಲುಪುತ್ತಾರೆ ಎಂದು ವರವನ್ನು ನೀಡುತ್ತಾರೆ.
ಮುರ ಅಸುರನು ಅಕ್ಕಿಯಲ್ಲಿ ಅಡಗಿ ಕುಳಿತಿದ್ದ ಎಂಬ ಕಾರಣಕ್ಕೆ ಈ ದಿನ ಅಕ್ಕಿಯಿಂದ ಮಾಡಿದ ಆಹಾರವನ್ನು ಸೇವಿಸಬಾರದು. ಮೊರಾ ಎಂದರೆ ರಾಜಸಿಕ ಹಾಗೂ ತಾಮಾಸಿಕ ಗುಣಗಳಿಗೆ ಪ್ರತೀಕ ಅವುಗಳನ್ನು ಉಪವಾಸ ವಿರುವುದರ ಮೂಲಕ ಜಯಿಸುವುದರ ಮೂಲಕ ಮುಕ್ತಿಗೆ ಮಾರ್ಗ ದೊರೆಯುತ್ತದಂತೆ.
ಏಕಾದಶಿಯಂದು ಉಪವಾಸವನ್ನು ಕೈಗೊಳ್ಳಬೇಕು ಮತ್ತು ಮರುದಿನ ದ್ವಾದಶಿಯಂದು ತುಳಸಿ ನೀರು ಸೇವಿಸಿ ಇತರ ಆಹಾರವನ್ನು ತೆಗೆದುಕೊಳ್ಳಬೇಕು. ಉದ್ದಿನ ಬೇಳೆ, ವಿಶೇಷ ಹಸಿರು ಸಸ್ಯಗಳು ಮತ್ತು ನೆಲ್ಲಿಕಾಯಿಯನ್ನು ಮೊಸರಿನಲ್ಲಿ ಬೆರೆಸಿ ಮಾಡಿದ ರಾಯಿತವನ್ನು ಈ ದಿನ ಸೇವಿಸಲಾಗುತ್ತದೆ.
ದಿನದಲ್ಲಿ ಒಂದು ಬಾರಿ ಆಹಾರವನ್ನು ಸೇವಿಸಬೇಕು ರಾತ್ರಿಯ ವೇಳೆ ಲಘು ಉಪಹಾರವನ್ನು ಸೇವಿಸಬೇಕು. ದ್ವಾದಶಿಯಂದು ತುಳಸಿ ನೀರನ್ನು ಸೇವಿಸುವುದನ್ನು ದ್ವಾದಶಿ ಭರಣಿ ಎಂದು ಕರೆಯಲಾಗುತ್ತದೆ. ಏಕಾದಶಿಯಂದು ಜನರು ಲಘುವಾದ ಉಪಹಾರವನ್ನು ಸೇವಿಸುತ್ತಾರೆ ಇದು ಸರಿಯಲ್ಲ. ಏಕಾದಶಿಯಂದು ವಿಷ್ಣು ಸಹಸ್ರನಾಮ ಮಂತ್ರವನ್ನು ಪಠಿಸಬೇಕು ಮತ್ತು ವಿಷ್ಣು ದೇವಾಲಯಗಳಿಗೆ ಭೇಟಿ ನೀಡಬೇಕು.
ವೈಕುಂಠ ಏಕಾದಶಿಯ ಧಾರ್ಮಿಕ ಮಹತ್ವ: ವೈಕುಂಠ ಏಕಾದಶಿಯನ್ನು ಈ ಹೆಸರಿನಲ್ಲಿ ಕೂಡ ಕರೆಯುತ್ತಾರೆ.
ಈ ದಿನದಂದು ವಿಷ್ಣುವಿನ ಆರಾಧನೆಯನ್ನು ಮಾಡುವುದು ಜನನ ಮತ್ತು ಮರಣದ ನೋವಿನಿಂದ ಮುಕ್ತಿಯನ್ನು ನೀಡುತ್ತದೆ ಎಂದಾಗಿದೆ.
ಈ ಚಕ್ರದಿಂದ ಆತ್ಮವು ಬಿಡುಗಡೆ ಹೊಂದಿ, ವಿಷ್ಣುವಿನ ಪಾದದಲ್ಲಿ ಸಮಾಧಾನವನ್ನು ಹೊಂದುತ್ತದೆ ಎಂದಾಗಿದೆ.
ಆದ್ದರಿಂದ ಈ ಪವಿತ್ರ ದಿನದಂದು ವಿಷ್ಣು ಭಕ್ತರು ಉಪವಾಸವನ್ನು ಕೈಗೊಳ್ಳುತ್ತಾರೆ. ಒಮ್ಮೆ ವಿಷ್ಣುವು ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದಾಗ ರಾಕ್ಷಸ ಮೂರನು ಅವರನ್ನು ವಧಿಸಲು ಪ್ರಯತ್ನಿಸುತ್ತಾನೆ. ವಿಷ್ಣುವಿನ ದೇಹದಿಂದ ಸ್ತ್ರೀ ಶಕ್ತಿಯು ಉದ್ಭವಗೊಂಡು ಮೂರನನ್ನು ವಧಿಸುತ್ತದೆ. ವಿಷ್ಣುವು ಆಕೆಗೆ ಏಕಾದಶಿ ಎಂಬ ಹೆಸರನ್ನು ನೀಡುತ್ತಾರೆ ಮತ್ತು ವರವನ್ನು ನೀಡಿ ಆಕೆಯನ್ನು ಅನುಗ್ರಹಿಸುತ್ತಾರೆ. ಯಾರೆಲ್ಲಾ ಈ ದಿನದಂದು ಉಪವಾಸ ಕೈಗೊಳ್ಳುತ್ತಾರೋ ಅವರಿಗೆ ವೈಕುಂಠಕ್ಕೆ ಹೋಗುವ ಸಿದ್ಧಿಯನ್ನು ಸ್ವಯಂ ವಿಷ್ಣುವೇ ಘೋಷಿಸುತ್ತಾರೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ವೈಕುಂಠವು ವಿಷ್ಣು ಮತ್ತು ಲಕ್ಷ್ಮೀ ದೇವಿಯ ವಾಸಸ್ಥಾನವಾಗಿದೆ. ನಿಮ್ಮಲ್ಲಿರುವ ಎಲ್ಲಾ ಅಹಂಕಾರ ಮತ್ತು ಮದವನ್ನು ನೀವು ತೊರೆದು ವಿಷ್ಣುವನ್ನೇ ನಿಮ್ಮ ಮನದಲ್ಲಿ ನೀವು ಸ್ಥಾಪಿಸಿದಾಗ ಮರಣದ ನಂತರ ವೈಕುಂಠಕ್ಕೆ ನೀವು ಹೋಗುತ್ತೀರಿ ಎಂದಾಗಿದೆ.
ವೈಕುಂಠ ಏಕಾದಶಿಯಂದು ವ್ರತವನ್ನು ಕೈಗೊಂಡಾಗ ವಿಷ್ಣುವಿನ ಪಾದತಳದಲ್ಲಿ ಮುಕ್ತಿಯನ್ನು ಹೊಂದಲು ಭಕ್ತರು ಕಾಯುತ್ತಾರೆ.
ವೈಕುಂಠದ ದ್ವಾರ ತೆರೆಯುವುದು ನಂಬಿಕೆಗಳ ಪ್ರಕಾರ, ಭಗವದ್ಗೀತೆಯನ್ನು ಓದುವವರು ಮತ್ತು ಅದನ್ನು ಪಾಲಿಸುವವರಿಗೆ ವೈಕುಂಠದ ದ್ವಾರ ತೆರೆಯುತ್ತದೆ. ಧ್ಯಾನ, ಭಕ್ತಿ ಮತ್ತು ಕರ್ಮದಲ್ಲಿ ತಮ್ಮನ್ನು ತೊಡಗಿಸಿಕೊಂಡವರಿಗೆ ವೈಕುಂಠದ ಬಾಗಿಲನ್ನು ತೆರೆಯುವುದು ಸುಲಭವಾಗಿದೆ. ವೈಕುಂಠ ಏಕಾದಶಿಯನ್ನು ನೀವು ಪೂರ್ಣ ನಿಷ್ಟೆಯಿಂದ ಪಾಲಿಸಿದಲ್ಲಿ, ವೈಕುಂಠದ ಬಾಗಿಲು ತೆರೆಯುತ್ತದೆ ಎಂಬುದಾಗಿ ಸನಾತನ ಧರ್ಮದ ನಂಬಿಕೆಗಳಲ್ಲಿದೆ.
ನಮ್ಮ ದೇಶದ ವಿಷ್ಣು ದೇವಾಲಯಗಳಲ್ಲಿ ಮತ್ತು ಪ್ರಸಿದ್ಧವಾದ ತಿರುಪತಿ ತಿಮ್ಮಪ್ಪ ದೇವಾಲಯದಲ್ಲಿ ವೈಕುಂಠ ಏಕಾದಶಿಯ ದಿನ ವಿಶೇಷವಾದ ಪೂಜಾ ಕಾರ್ಯಕ್ರಮ ಏರ್ಪಡಿಸಿಲಾಗಿರುತ್ತದೆ. ಅಂದು ಲಕ್ಷಾಂತರ ಭಕ್ತರು ತಿಮ್ಮಪ್ಪನ ದರ್ಶನಭಾಗ್ಯಕ್ಕಾಗಿ ಹಾತೊರೆಯತ್ತಿರುತ್ತಾರೆ. ತಿಮ್ಮಪ್ಪ ನ ದೇವಾಲಯದಲ್ಲಿ ವೈಕುಂಠದ ಬಾಗಿಲು ತೆರೆಯುತ್ತದೆ ಎಂಬ ಮಾತು ಭಕ್ತರದು.
ವೈಕುಂಠ ಏಕಾದಶಿಯ ದಿನ ವಿಷ್ಣುವಿನ ಸ್ಮರಣೆ ಮಾಡುತ್ತಾ ಕೃಪೆಗೆ ಪಾತ್ರರಾಗೋಣ.

