ಬೆಂಗಳೂರು: ನೈಟ್ ಕರ್ಫ್ಯೂ ನಿರ್ಧಾರವನ್ನು ಬಹಳ ವಿವೇಚನೆಯಿಂದ ಕೈಗೊಳ್ಳಲಾಗಿತ್ತು. ಅದೇನೂ ರಾಜಕೀಯ ನಿರ್ಧಾರ ಅಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಶುಕ್ರವಾರ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಎಡಬಿಡಂಗಿ ಸರ್ಕಾರ ಎನ್ನಲಾಗಿದೆ. ಆದರೆ ಇದೇ ನಮ್ಮ ಸರ್ಕಾರ ಉತ್ತಮವಾದ ನಿರ್ಧಾರಗಳಿಂದ ಕೊರೊನಾ ನಿಯಂತ್ರಣಕ್ಕೆ ತಂದಿದೆ ಎಂದರು.
ಯು.ಕೆ.ಯಲ್ಲಿ ಲಾಕ್ ಡೌನ್ ಆಗಿದೆ ಹಾಗೂ ಜರ್ಮನಿಯಲ್ಲಿ ರಾತ್ರಿ ಕರ್ಫ್ಯೂ ಹಾಕಲಾಗಿದೆ ಎಂದು ತಿಳಿಸಿದರು.
ಹಾಗೆಂದು ಅಲ್ಲಿ ಇರುವವರಿಗೆ ಬುದ್ಧಿ ಇಲ್ಲ ಎಂದರ್ಥವಲ್ಲ. ನಮ್ಮ ಸರ್ಕಾರ ಯಾವುದೇ ರಾಜಕೀಯ ತೀರ್ಮಾನ ಕೈಗೊಂಡಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದವರ ಜೊತೆ ಕೂಲಕಂಷವಾಗಿ ಚರ್ಚಿಸಿ ಪ್ರತಿಯೊಂದು ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾತ್ರಿ ಕರ್ಫ್ಯೂ ಕುರಿತು ಕೂಡ ಹಲವಾರು ಬಾರಿ ಚರ್ಚಿಸಿ, ಜನರ ಆರೋಗ್ಯದ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಸ್ಪಷ್ಟಪಡಿಸಿದರು.

