ಮೈಸೂರು: ಆರ್ ಎಸ್ ಎಸ್ ಅಂದರೆ ಮೈಲಿಗೆ ಏಕೆ? ಎಂದು ಕೇಳುವ ಮೂಲಕ ಎಂಎಲ್ ಸಿ ಹೆಚ್ ವಿಶ್ವನಾಥ್ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ನಗರದಲ್ಲಿ ಭಾನುವಾರ ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಕುರುಬ ಸಮುದಾಯವನ್ನು ಎಸ್‍ಟಿಗೆ ಸೇರಿಸುವ ಕುರಿತು ಆರ್.ಎಸ್.ಎಸ್. ಕುಮ್ಮಕ್ಕು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಆರ್.ಎಸ್.ಎಸ್. ಸಂಘಟನೆಯನ್ನು ಬ್ಯಾನ್ ಮಾಡಿದ್ದಾರಾ? ಆರ್.ಎಸ್.ಎಸ್. ಅಂದರೆ ಮೈಲಿಗೆ ಏಕೆ ಆರ್.ಎಸ್.ಎಸ್., ಯೂಥ್ ಕಾಂಗ್ರೆಸ್, ಯುವ ಜನತಾದಳ, ಯುವ ಮೋರ್ಚಗಳಿವೆ. ಎಲ್ಲರ ಬೆಂಬಲ ನಮಗೆ ಬೇಕಾಗಿದೆ. ಬರೀ ಆರ್.ಎಸ್.ಎಸ್. ಬಗ್ಗೆ ಏಕೆ ಹೇಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ವಿಶ್ವನಾಥ್ ತಿರುಗೇಟು ನೀಡಿದರು.
ಸಮುದಾಯವನ್ನು ಎಸ್‍ಟಿಗೆ ಸೇರಿಸುವ ವಿಚಾರದಲ್ಲಿ ಎಲ್ಲಾ ಸಂಘಟನೆ ಪಕ್ಷಗಳ ಬೆಂಬಲ ಕೇಳಿದ್ದೇವೆ. ಅದರಲ್ಲಿ ಆರ್ ಎಸ್ ಎಸ್ ಸಹಾ ಇದೆ ಅದರಲ್ಲಿ ಸಮಸ್ಯೆ ಏನು..? ಎಂದರು.
ಕುರುಬ ಸಮುದಾಯ ಎಸ್‍ಟಿಗೆ ಸೇರಿಸುವ ಹೋರಾಟಕ್ಕೆ ಸಿದ್ದರಾಮಯ್ಯ ವಿರೋಧ ಇಲ್ಲ. ಇದು ಸಿದ್ದರಾಮಯ್ಯ, ಈಶ್ವರಪ್ಪ, ವಿಶ್ವನಾಥ್ ಪ್ರಶ್ನೆ ಅಲ್ಲ. ಇದು ಸಮುದಾಯದ ಪ್ರಶ್ನೆ ಎಂದು ವಿಶ್ವನಾಥ್ ಹೇಳಿದರು.
ಕುರುಬ ಸಮುದಾಯ ಎಸ್‍ಟಿಗೆ ಸೇರಿಸುವ ಹೋರಾಟಕ್ಕೆ ಹೀಗಾಗಲೇ ಸಿದ್ದರಾಮಯ್ಯ ಅವರನ್ನು ಕರೆದಿದ್ದೇನೆ. ಅವರು ನಮ್ಮ ಜೊತೆಗೆ ಇದ್ದಾರೆ ಎಂದು ತಿಳಿಸಿದರು.
ನಿರಂಜನಾನಂದಪುರ ಸ್ವಾಮಿಗಳ ಮೂಲಕ ನಾನು ಹಾಗೂ ಸೋಮಶೇಖರ್ ವರದಿ ಸರ್ಕಾರಕ್ಕೆ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರ ಕೂಡ ಕುರುಬ ಸಮುದಾಯದ ಸಂಪ್ರದಾಯ ಮನಗಂಡು ಎಸ್‍ಟಿ ಸೇರ್ಪಡೆ ಮಾಡಬೇಕು. ಮೇಲ್ವರ್ಗದ ಜನ ಕೂಡ ನಮಗೆ ಸಹಕಾರ ನೀಡುವ ಮೂಲಕ ಕೇಂದ್ರಕ್ಕೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
29ಕ್ಕೆ ಮೈಸೂರಿನಲ್ಲಿ ಕುರುಬ ನಾಯಕರ ಸಭೆ ಏರ್ಪಡಿಸಲಾಗಿದೆ. ಅಲ್ಲಿ ಹೋರಾಟದ ಮುಂದಿನ ರೂಪುರೇಷೆ ಸಿದ್ಧಪಡಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಆರ್.ಎಸ್.ಎಸ್. ಅಂದರೆ ಮೈಲಿಗೆ ಏಕೆ? ಹೆಚ್. ವಿಶ್ವನಾಥ್ ಪ್ರಶ್ನೆ

