ಕೌಶಲಾಭಿವೃದ್ಧಿ ಉದ್ಯೋಗಕ್ಕೆ ಸಂಬಂಧಿಸಿದ ಮೂರು ಒಪ್ಪಂದಗಳಿಗೆ ಅಂಕಿತ-ಡಿಸಿಎಂ

ಬೆಂಗಳೂರು: ಕೌಶಲ ತರಬೇತಿ ಪಡೆದುಕೊಂಡಿರುವ ಯುವಕರಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸುವ ಸಂಬಂಧ ರಾಜ್ಯ ಸರಕಾರವು ಮೂರು ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಕೌಶಲ್ಯಾಭಿವೃದ್ಧಿ ಖಾತೆ ಮಂತ್ರಿಗಳೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ನಗರದ ಡೇರಿ ವೃತ್ತದ ಕಲ್ಯಾಣ ಸುರಕ್ಷಾ ಭವನದಲ್ಲಿನ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ನವೀಕೃತ ಕಟ್ಟಡದ ಕಚೇರಿ ಹಾಗೂ ಅಂತಾರಾಷ್ಟ್ರೀಯ ವಲಸೆ ಕೇಂದ್ರವನ್ನು ಮಂಗಳವಾರ ಡಿಸಿಎಂ ಉದ್ಘಾಟಿಸಿ ಮಾತನಾಡಿದರು.
ಈ ಒಪ್ಪಂದಗಳಿಂದ ಅನೇಕರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದ ಅವರು, ಜತೆಗೆ ಪ್ರಾಥಮಿಕ ಹಂತದಲ್ಲೇ ಕೌಶಲ ಶಿಕ್ಷಣ ನೀಡಲು ಸರಕಾರ ನಿರ್ಧರಿಸಿದ್ದು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕುಶಲತೆಯನ್ನು ಕಲಿಸುವ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಆ ಬಗ್ಗೆ ಸರಕಾರ ಹೆಚ್ಚು ಒತ್ತಾಸೆ ನೀಡುತ್ತಿದೆ ಎಂದು ಅವರು ಹೇಳಿದರು.
ಕೌಶಲಾಭಿವೃದ್ಧಿ ಪ್ರಾಧಿಕಾರದ ನವೀಕೃತ ಕಟ್ಟಡವನ್ನು ಅತ್ಯಾಧುನಿಕ ಸೌಲಭ್ಯಗಳ ಮೂಲಕ ನವೀಕರಣ ಮಾಡಲಾಗಿದೆ. ಜತೆಗೆ, ಅಂತಾರಾಷ್ಟ್ರೀಯ ವಲಸೆ ಕೇಂದ್ರವು ವಿದೇಶಗಳಲ್ಲಿ ಕೌಶಲ್ಯ ಆಧಾರಿತ ಉದ್ಯೋಗ ಬಯಸುವ ನಮ್ಮ ಉತ್ಸಾಹಿ ಯುವಜನರಿಗೆ ಶಕ್ತಿ ನೀಡಿ ಸೂಕ್ತ ಮಾರ್ಗದರ್ಶನ-ಸಹಕಾರ ನೀಡುತ್ತದೆ ಎಂದು ಡಿಸಿಎಂ ಹೇಳಿದರು.
ರಾಜ್ಯ ಕೌಶಲಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ರತ್ನಪ್ರಭಾ, ಶಾಸಕ ಉದಯ್ ಗರುಡಾಚಾರ್, ಕೌಶಲಾವೃದ್ಧಿ ಇಲಾಖೆಯ ಕಾರ್ಯದರ್ಶಿ ಸೆಲ್ವಕುಮಾರ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತ ಡಾ.ತ್ರಿಲೋಕ ಚಂದ್ರ, ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.